janadhvani

Kannada Online News Paper

ಅಬುಧಾಬಿ: ಕೊರೋನ ಹರಡುವುದನ್ನು ತಡೆಯಲು ಕೊಲ್ಲಿ ರಾಷ್ಟ್ರಗಳು ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿವೆ. ಯುಎಇಯಲ್ಲಿ ನರ್ಸರಿಗಳನ್ನು ನಾಳೆಯಿಂದ ಮುಚ್ಚಲು ನಿರ್ಧರಿಸಲಾಗಿದೆ. ಕರೋನಾ ಮೊದಲ ಬಾರಿಗೆ ಖತರ್‌ನಲ್ಲಿ ವರದಿಯಾಗಿದ್ದು, ಇರಾನ್‌ನಿಂದ ಕತಾರ್‌ಗೆ ಮರಳಿದ 36ರ ಹರೆಯದ ವ್ಯಕ್ತಿಗೆ ಕರೋನಾ ಖಚಿತಪಡಿಸಲಾಗಿದೆ.

ಯುಎಇಯಲ್ಲಿ ಹೊಸತಾಗಿ ಇಬ್ಬರಿಗೆ ಸೋಂಕು ತಗುಲಿದ್ದು, ಒಟ್ಟು ಕೊರೋನ ಖಚಿತಪಡಿಸಲಾದವರ ಸಂಖ್ಯೆ 21 ದಾಟಿದೆ. ಅಂತರ್‌ರಾಷ್ಟ್ರೀಯ ಸೈಕಲ್ ರೇಸ್‌ನಲ್ಲಿ ಭಾಗವಹಿಸಲು ಬಂದಿಳಿದ 170 ಕ್ರೀಡಾಪಟುಗಳನ್ನು ಪರಿಶೋಧನೆಗೊಳಪಡಿಸಲಾಗಿದ್ದು, ಅವರು ಎಲ್ಲರೂ ಕೊರೋನಾದಿಂದ ಮುಕ್ತರಾಗಿದ್ದಾರೆ ಎನ್ನಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ಎಲ್ಲಾ ನರ್ಸರಿಗಳನ್ನು ನಾಳೆಯಿಂದ ಮುಚ್ಚಲಾಗುವುದು. ಸ್ಟಡಿ ಟೂರ್ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಯುಎಇ ಶಾಲೆಗಳಿಗೆ ಸೂಚನೆ ನೀಡಿದೆ. ಬಹ್ರೈನ್‌ನಲ್ಲಿ ಮುಂದಿನ ಎರಡು ವಾರಗಳವರೆಗೆ, ಸಭೆ ಸಮಾರಂಭಗಳು ನಡೆಸದಂತೆ ಎಲ್ಲಾ ಸಂಘಟನೆಗಳಿಗೆ ನೀಡಲಾಗಿದೆ. ಕುವೈತ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಭಾರತೀಯರಿಗೆ ಸೌದಿ ಅರೇಬಿಯಾಕ್ಕೆ ಭೇಟಿಗೆ ನಿಷೇಧವಿಲ್ಲ. ಆದರೆ, ವಿಮಾನ ನಿಲ್ದಾಣದಿಂದ ಹೊರಬರಲು ತಾಸುಗಳೇ ಬೇಕಾಗುತ್ತಿದೆ. ಕರೋನ ಭೀತಿಯ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಿರುವುದೇ ಇದಕ್ಕೆ ಕಾರಣ.

ಏತನ್ಮಧ್ಯೆ, ಮಧ್ಯಪ್ರಾಚ್ಯದಲ್ಲಿ ಕರೋನಗೆ ತುತ್ತಾಗಿರುವ ಇರಾನ್‌ಗೆ ಸಹಾಯ ನೀಡಲು ಸಿದ್ಧ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ. ಇರಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊರೋನ ಭಯವು ತೈಲ ಮತ್ತು ಷೇರು ಮಾರುಕಟ್ಟೆಗಳಿಗೆ ಬಾರೀ ಹೊಡೆತ ನೀಡಿದೆ.

error: Content is protected !!
%d bloggers like this: