janadhvani

Kannada Online News Paper

“ಪಾಕಿಸ್ತಾನ್ ಝಿಂದಾಬಾದ್”: ನನ್ನ ಉದ್ದೇಶವನ್ನು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ- ಅಮೂಲ್ಯ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಿನ್ನೆ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೈದ್ರಾಬಾದ್ನ ಸಂಸದ ಅಸದುದ್ದೀನ್ ಉವೈಸಿ ಭಾಗಿವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆಯಲ್ಲಿ ಅಮೂಲ್ಯ ಲಿಯೋನ್ ಎಂಬ ಯುವತಿ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಈ ಬಗ್ಗೆ ಅಮೂಲ್ಯ ಪೊಲೀಸರ ಮುಂದೆ ಸ್ವಇಚ್ಛಾ ಹೇಳಿಕೆ ನೀಡಿದ್ದಾಳೆ.

ನನ್ನ ಹೆಸರು ಅಮೂಲ್ಯ ಲಿಯೋನ್. ನಾನು ಮೂಲತಃ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಶಿವಪುರದ ಹಳ್ಳಿಯವಳು. ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಮಾಡಿದ್ದೇನೆ. ನಾನು ಸಿಎಎ ವಿರೋಧಿಸಿ ನಿರಂತರವಾಗಿ ಪ್ರತಿಭಟನೆಯನ್ನು ಮಾಡುತ್ತಾ ಇದ್ದೇನೆ. ದೇಶದ ಯಾವುದೇ ಮೂಲೆಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದರೂ ನಾನು ಅದರಲ್ಲಿ ಭಾಗಿಯಾಗುತ್ತಿದ್ದೆ, ನನ್ನ ಉದ್ದೇಶ ಸ್ಪಷ್ಟವಾಗಿತ್ತು. ನಾನು ಯಾವುದೇ ದೇಶದ್ರೋಹಿ ಕೆಲಸವನ್ನು ಮಾಡಿಲ್ಲ. ಮುಂದೆಂದೂ ಮಾಡುವುದೂ ಇಲ್ಲ ಎಂದಿದ್ದಾಳೆ.

ಇತ್ತೀಚೆಗೆ ಸಿಎಎ ಪ್ರತಿಭಟನೆಗೆ ಸಂಸದ ಅಸದುದ್ದೀನ್ ಉವೈಸಿ ಅವರು ಬೆಂಗಳೂರಿಗೆ ಬರುವ ವಿಚಾರ ನನಗೆ ತಿಳಿಯಿತು. ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ನಾನು ನಿರಂತರವಾಗಿ ಭಾಗವಹಿಸುತ್ತಿದ್ದೆ, ಈ ಪ್ರತಿಭಟನೆಯಲ್ಲಿ ಭಾಗಿವಹಿಸುವುದು ನನ್ನ ಆಸೆ ಆಗಿತ್ತು. ಅದರಂತೆ ನಾನು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ, ಇದೇ ವೇಳೆ ನಾನು ವೇದಿಕೆ ಮೇಲೆ ಹೋದಾಗ ಆಗಷ್ಟೇ ಉವೈಸಿ ಕೂಡ ಆಗಮಿಸಿದ್ದರು, ಅವರ ತತ್ವ ಸಿದ್ಧಾಂತಗಳಿಗೆ ನಾನು ಮಾರು ಹೋದವಳಲ್ಲ. ನನಗೆ ನನ್ನದೇ ಆದ ತತ್ವ ಸಿದ್ಧಾಂತವಿದೆ. ಅವರು ಬಂದಾಗ ನಾನು ಮಾತನಾಡಲು ಶುರು ಮಾಡಿದ್ದೆ ಎಂದು ಅಮೂಲ್ಯ ಲಿಯೋನ್ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಇನ್ನು ನಾನು ಪ್ರಪಂಚದ ನಾಗರಿಕಳಾಗಿ, ನನಗೆ ಗಡಿ ಎಲ್ಲಿಯೂ ಇಲ್ಲ. ಎಲ್ಲಾ ದೇಶವನ್ನು ನಾನು ಪ್ರೀತಿ ಮಾಡುತ್ತೇನೆ. ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದು ನಿಜ,ಅದು ಯಾಕೆ ಹೇಳಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ, ಹಾಗಂತ ನಾನು ದೇಶದ್ರೋಹ ಮಾಡಿಲ್ಲ. ನಾನು ಎಲ್ಲೂ ಕೂಡ ಭಾರತದ ವಿರೋಧವಾಗಿ ಮಾತನಾಡಿಲ್ಲ ಎಂದು ಅಮೂಲ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾಳೆ.

ಭಾರತದ ಬಗ್ಗೆ ಅಗೌರವದಿಂದ ನಾನು ನಡೆದುಕೊಂಡವಳಲ್ಲ, ನಾನು ಸಂವಿಧಾನಕ್ಕೆ ಬೆಲೆಕೊಡ್ತೀನಿ. ಸಂವಿಧಾನಕ್ಕೆ ನಾನೆಂದು ಧಕ್ಕೆ ತರುವುದಿಲ್ಲ. ಕಾನೂನನ್ನು ಅನುಕೂಲಕ್ಕೆ ತಕ್ಕಂತೆ ಬದಲಿಸುತ್ತಿದ್ದಾರೆ. ನಾನು ಸಂವಿಧಾನವನ್ನು ಮಾತ್ರ ಪರಿಪಾಲಿಸ್ತೀನಿ.

ಅಲ್ಲದೆ, ನಿನ್ನೆಯ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಆಯೋಜಕರು ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ, ಅವರು ಮಾತನಾಡಲು ಅವಕಾಶ ಕೊಟ್ಟಿದ್ರೆ ನನ್ನ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ಇದ್ದೆ. ಆದರೆ, ಆಯೋಜಕರು ಆತುರವಾಗಿ ನನ್ನನ್ನು ಈ ಪರಿಸ್ಥಿತಿಗೆ ತಂದಿದ್ದು, ನಾನು ಏನು ಹೇಳಬೇಕು ಅಂದುಕೊಂಡಿದ್ದೆ ಅದನ್ನು ಹೇಳೋದಕ್ಕೆ ಸಾಧ್ಯವೇ ಆಗಲಿಲ್ಲ. ನನ್ನ ಉದ್ದೇಶ. ನಿಮ್ಮ ಮುಂದೆ ಈಗ ಹೇಳುವುದಿಲ್ಲ ಎಂದು ಅಮೂಲ್ಯ ಲಿಯೋನ್ ಪೊಲೀಸರ ತನಿಖೆ ವೇಳೆ ಸ್ಪಷ್ಟನೆ ನೀಡಿದ್ದಾಳೆ.

error: Content is protected !! Not allowed copy content from janadhvani.com