janadhvani

Kannada Online News Paper

‘ಪಾಕಿಸ್ತಾನ್ ಝಿಂದಾಬಾದ್’ ಕೂಗಿದ ಅಮೂಲ್ಯ- ಮೈಕ್ ಕಿತ್ತುಕೊಂಡ ಅಸದುದ್ದೀನ್ ಉವೈಸಿ

ಬೆಂಗಳೂರು, ಫೆ.20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನಾ ಸಮಾರಂಭಗಳಲ್ಲಿ ಆವೇಶಭರಿತ ಭಾಷಣ ಮಾಡುವ ಯುವ ಹೋರಾಟಗಾರ್ತಿ ಅಮೂಲ್ಯ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ‘ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದ ಅಹಿತಕರ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಲು ಆರಂಭಿಸಿದ ಅಮೂಲ್ಯ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರ ಸಮ್ಮುಖದಲ್ಲೇ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿದರು. ಕೂಡಲೇ ಧಾವಿಸಿ ಬಂದ ಅಸದುದ್ದೀನ್ ಉವೈಸಿ ಹಾಗೂ ಸಂಘಟಕರು ಅಮೂಲ್ಯ ಕೈಯಲ್ಲಿದ್ದ ಮೈಕ್ ಕಿತ್ತುಕೊಂಡರು. ನಂತರ ಆಕೆಯನ್ನು ಪ್ರತಿಭಟನಕಾರರು ಮತ್ತು ಸಂಘಟಕರು ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಉವೈಸಿ, “ತಾನು ಅಮೂಲ್ಯ ಅವರ ಮಾತನ್ನು ಒಪ್ಪುವುದಿಲ್ಲ, ನನಗೂ ನನ್ನ ಪಕ್ಷಕ್ಕೂ ಅವರೊಂದಿಗೆ ಯಾವುದೇ ಸಂಬಂಧವಿಲ್ಲ, ನಾವು ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದರು. “ಸಂಘಟಕರು ಅಂತಹವರನ್ನು ಇಲ್ಲಿಗೆ ಆಹ್ವಾನಿಸಬಾರದಿತ್ತು,ಇದು ನನಗೆ ತಿಳಿದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ” ನಾವು ಭಾರತಕ್ಕಾಗಿ ಹೋರಾಡುತ್ತಿದ್ದೇವೆ, ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ನಾವು ಯಾವುದೇ ರೀತಿಯಲ್ಲಿ ಬೆಂಬಲಿಸುವುದಿಲ್ಲ, ನಮ್ಮ ಸಂಪೂರ್ಣ ಹೋರಾಟ ಭಾರತವನ್ನು ಉಳಿಸುವುದಾಗಿದೆ” ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಹೇಳಿದರು.

ಜೆಡಿ (ಎಸ್) ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರು ಮಾತನಾಡಿ, ಕಾರ್ಯಕ್ರಮವನ್ನು ಅಡ್ಡಿಪಡಿಸಲು ವಿರೋಧಿಗಳಿಂದ ಪಿತೂರಿ ನಡೆದಿದೆ,ಭಾಷಣಗಾರರ ಪಟ್ಟಿಯಲ್ಲಿ ಅಮೂಲ್ಯ ಹೆಸರಿರಲಿಲ್ಲ,ಪೊಲೀಸರು ಈ ಬಗ್ಗೆ ತೀವ್ರವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಪಾಕಿಸ್ತಾನ್ ಝಿಂದಾಬಾದ್, ಹಿಂದುಸ್ತಾನ್ ಝಿಂದಾಬಾದ್ ಇವೆರಡು ಘೋಷಣೆಗಳ ನಡುವೆ ಭಾರತೀಯರಾದ ನಮ್ಮ ಕೂಗು ಯಾವ ಘೋಷಣೆಯೊಂದಿಗೆ ಧನಿಗೂಡಿಸುತ್ತಿದೆ ಎಂಬುದನ್ನು ಮನದಟ್ಟಾಗಿಸಲು ಅಮೂಲ್ಯ ಈ ರೀತಿಯ ಉಪಾಯದೊಂದಿಗೆ ಭಾಷಣ ಆರಂಭಿಸಿದ್ದೇ ತನಗೆ ಮುಳುವಾಗಿ ಪರಿಣಮಿಸಿದೆ.

ತನ್ನ ಉದ್ದೇಶವನ್ನು ಸಭಿಕರ ಮುಂದಿಡಲು ಸಂಘಟಕರು ಅನುಮತಿಸದ ಹಿನ್ನಲೆಯಲ್ಲಿ ಅಮೂಲ್ಯ ಅವರ ಭಾಷಣವು ಗೊಂದಲಕ್ಕೀಡಾಗಿ, ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ.

error: Content is protected !! Not allowed copy content from janadhvani.com