janadhvani

Kannada Online News Paper

ಗಲ್ಲು ಶಿಕ್ಷೆಗೆ ದಿನಗಣನೆ: ಜೈಲಿನ ಗೋಡೆಗೆ ತಲೆ ಹೊಡೆದುಕೊಂಡ ನಿರ್ಭಯಾ ಹಂತಕ

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಾರ್ಚ್‌ 3ರ ಬೆಳಿಗ್ಗೆ ಗಲ್ಲು ಶಿಕ್ಷೆ ಜಾರಿಗೆ ದೆಹಲಿ ಕೋರ್ಟ್‌ ಸೋಮವಾರ ತೀರ್ಪು ನೀಡಿದ ಬೆನ್ನಲ್ಲೇ ಅಪರಾಧಿಗಳಲ್ಲೊಬ್ಬನಾದ ವಿನಯ್ ಶರ್ಮಾ, ಜೈಲಿನ ಗೋಡೆಗೆ ತಲೆಯನ್ನು ಚಚ್ಚಿಕೊಂಡಿದ್ದಾನೆ.

ಘಟನೆಯಲ್ಲಿ ಅಪರಾಧಿಯ ತಲೆ ಮತ್ತು ಕೈಗೆ ಸಣ್ಣಪುಟ್ಟ ಗಾಯವಾಗಿದ್ದು, ಜೈಲಿನ ಅಧಿಕಾರಿಗಳು ಉಪಚರಿಸುತ್ತಿದ್ದಾರೆ ಎಂದು ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಮುಕೇಶ್‌ ಕುಮಾರ್‌ಸಿಂಗ್ (32), ಪವನ್ ಗುಪ್ತಾ (25), ವಿನಯ್‌ಕುಮಾರ್ ಶರ್ಮಾ (26) ಮತ್ತು ಅಕ್ಷಯ್‌ ಕುಮಾರ್ (31) ಅವರನ್ನು ಗಲ್ಲಿಗೇರಿಸುವಂತೆ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಆದೇಶ ಹೊರಡಿಸಿದ್ದರು.

ಅಪರಾಧಿ ವಿನಯ್‌ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಈ ಬಗ್ಗೆ ತಿಹಾರ್‌ ಜೈಲು ಪ್ರಾಧಿಕಾರದಿಂದ ವರದಿಯನ್ನು ತರಿಸಿಕೊಳ್ಳಬಹುದು. ಅಕ್ಷಯ್‌ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿ ವಜಾ ಆಗಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಲು ಆತ ಬಯಸಿದ್ದಾನೆ ಎಂದು ಆತನ ಪರ ವಕೀಲ ಎ.ಪಿ.ಸಿಂಗ್‌ ಹೇಳಿದರು.

ಆದರೆ, ವಿನಯ್‌ ಮಾನಸಿಕ ಅಸ್ವಸ್ಥ ಎಂಬ ವಾದವನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ. ಅಲ್ಲದೆ, ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅಕ್ಷಯ್‌ ಸಿದ್ಧತೆ ನಡೆಸುತ್ತಿದ್ದಾನೆ ಎಂಬುದು ಮರಣ ದಂಡನೆ ಜಾರಿ ಮುಂದೂಡಲು ಕಾರಣವಾಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ರಾಷ್ಟ್ರಪತಿಗಳು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರುವರಿ 14ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಆರು ಜನ ಅಪರಾಧಿಗಳಲ್ಲಿ ಓರ್ವ ಬಾಲಾಪರಾಧಿಯನ್ನು 2015ರಲ್ಲಿಯೇ ಬಿಡುಗಡೆ ಮಾಡಲಾಗಿದ್ದು, ಪ್ರಕರಣದ ಪ್ರಮುಖ ಆಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

error: Content is protected !! Not allowed copy content from janadhvani.com