janadhvani

Kannada Online News Paper

ಮಂಗಳೂರು ಗೋಲಿಬಾರ್: 22 ಮಂದಿಗೆ ಜಾಮೀನು- ಪೋಲೀಸರ ಮೇಲೆ FIR ಗೆ ಆದೇಶ

ಬೆಂಗಳೂರು,ಫೆ.19 : ಮಂಗಳೂರಿನಲ್ಲಿ ಜ.19 ರಂದು ನಡೆದ ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆನ್ನಲಾದ 22 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದ ಎನ್ನಲಾದ 22 ಮಂದಿಯನ್ನು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ 22 ಮಂದಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟು 22 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಪೊಲೀಸರು ಇವರನ್ನು ಬಂಧಿಸುವಾಗ ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸದ ಕಾರಣ ನ್ಯಾಯಲಯ ಎಲ್ಲಾ 22 ಮಂದಿಗೆ ಜಾಮೀನನ್ನು ಮಂಜೂರು ಮಾಡಿದೆ.

ಪೊಲೀಸರ ಮೇಲೆ ಎಫ್.ಐ.ಆರ್ ಗೆ ಆದೇಶ:
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿದ್ದು, ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ.

ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಾ ಇಲ್ಲ ಅಂತ ಹೈಕೋರ್ಟ್ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲು ಮಾಡೋದಕ್ಕೆ ಸೂಚನೆ ನೀಡಿದೆ.

error: Content is protected !! Not allowed copy content from janadhvani.com