ಗೋಮೂತ್ರ, ಸಗಣಿಯಿಂದ ಟೂತ್ ಪೇಸ್ಟ್, ಶ್ಯಾಂಪೂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಚಿಂತನೆ

ಹೊಸದಿಲ್ಲಿ, ಫೆ.16: ಟೂತ್ ಪೇಸ್ಟ್, ಶ್ಯಾಂಪೂ, ಸೊಳ್ಳೆ ನಿವಾರಕಗಳಂತಹ ಪರ್ಸನಲ್ ಕೇರ್ ಉತ್ಪನ್ನಗಳು ಮತ್ತು ಕ್ಯಾನ್ಸರ್ ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಔಷಧಿಗಳನ್ನು ಅಭಿವೃದ್ಧಿಗೊಳಿಸಲು ದೇಶಿ ಆಕಳುಗಳ ಮೂತ್ರ ಮತ್ತು ಸಗಣಿಯ ಕುರಿತು ಸಂಶೋಧನೆ ನಡೆಸಲು ವಿಜ್ಞಾನಿಗಳಿಗಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರವು ಎದುರು ನೋಡುತ್ತಿದೆ ಎಂದು Theprint.in ಪ್ರಕಟಿಸಿರುವ ಮೋಹನಾ ಬಸು ಅವರ ವಿಶೇಷ ವರದಿ ತಿಳಿಸಿದೆ.

‘ದೇಶಿ ಆಕಳುಗಳ ಉತ್ಪನ್ನಗಳ ಕುರಿತು ಹೆಚ್ಚಿನ ಸಂಶೋಧನೆಯ ಮೂಲಕ ವೈಜ್ಞಾನಿಕ ಬಳಕೆ (ಎಸ್‌ಯುಟಿಆರ್‌ಎ-ಪಿಐಸಿ ಇಂಡಿಯಾ)’ ಎಂದು ಹೆಸರಿಸಲಾಗಿರುವ ಕಾರ್ಯಕ್ರಮದಡಿ ಈ ಸಂಶೋಧನೆ ನಡೆಯಲಿದೆ. ಇದು ಸರಕಾರದ ನೂತನ ಅಂತರ್‌ ಸಚಿವಾಲಯ ಆರ್ಥಿಕ ಸಹಭಾಗಿತ್ವದ ಯೋಜನೆಯಾಗಿದ್ದು, ವಿವಿಧ ಸರಕಾರಿ ಏಜೆನ್ಸಿಗಳ ಬೆಂಬಲ ಹೊಂದಿದೆ.

ಆಯುಷ್ ಸಚಿವಾಲಯ, ನೂತನ ಮತ್ತು ನವೀಕರಿಸಬಹುದಾದ ಶಕ್ತಿ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ನೂತನ ಯೋಜನೆಯೊಂದಿಗೆ ಕೈಜೋಡಿಸಿವೆ.

ಸರಕಾರವು ಶುಕ್ರವಾರ ವಿಜ್ಞಾನಿಗಳು, ವಿದ್ವಾಂಸರು ಮತ್ತು ತಳಮಟ್ಟದ ಸಂಸ್ಥೆಗಳಿಂದ ಯೋಜನಾ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಯೋಜನೆಗಾಗಿ ಈಗಾಗಲೇ 98 ಕೋ.ರೂ. ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಆಯುರ್ವೇದ ವೈದ್ಯರು ಗೋ ಉತ್ಪನ್ನಗಳನ್ನು ಬಳಸುತ್ತಿದ್ದಾರಾದರೂ ಈ ಕುರಿತು ಸಾಕಷ್ಟು ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗಳು ನಡೆದಿಲ್ಲ ಎಂದು ಯೋಜನೆಯ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸೊಳ್ಳೆ ನಿವಾರಕಗಳು, ನೆಲ ಸ್ವಚ್ಛಗೊಳಿಸುವ ದ್ರಾವಣಗಳು ಹಾಗೂ ದಂತ ಮಂಜನ, ಕೇಶತೈಲ, ಶಾಂಪೂಗಳು ಮತ್ತು ಕಂಡಿಷನರ್‌ ಗಳಂತಹ ವೈಯಕ್ತಿಕ ಆರೈಕೆಯ ಬಳಕೆ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಲು ಸರಕಾರವು ಬಯಸಿದೆ.

ಗೋಮೂತ್ರವನ್ನು ಬಳಸಿ ಪರಿಣಾಮಕಾರಿ ತಲೆಗೂದಲ ಹೊಟ್ಟು ನಿವಾರಕಗಳನ್ನು ತಯಾರಿಸಬಹುದು ಎನ್ನುವುದನ್ನು ಪ್ರಾಥಮಿಕ ಅಧ್ಯಯನಗಳು ತೋರಿಸಿವೆ. ಬೆರಣಿಯ ಹೊಗೆಯಿಂದ ಸೊಳ್ಳೆಗಳನ್ನು ದೂರವಿಡಬಹುದು ಎಂದೂ ಹೇಳಲಾಗಿದೆ. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ನೆಲವನ್ನು ಸಗಣಿಯಿಂದ ಸಾರಿಸುವ ಸಂಪ್ರದಾಯವು ನೊಣಗಳು ಮತ್ತು ಇತರ ಕ್ರಿಮಿಕೀಟಗಳ ಹಾವಳಿಯನ್ನು ನಿಯಂತ್ರಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಉತ್ಪನ್ನಗಳು ಲಭ್ಯವಿವೆ. ಆದರೆ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆದಿಲ್ಲ ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸರಕಾರವು ಕೆಲವು ವಿಶಿಷ್ಟ ಗುಣಗಳು ಮತ್ತು ಲಕ್ಷಣಗಳನ್ನು ಹೊಂದಿವೆ ಎಂದು ನಂಬಲಾಗಿರುವ ದೇಶಿ ಆಕಳುಗಳ ವೈಶಿಷ್ಟದ ಕುರಿತೂ ಸಂಶೋಧನೆಗೆ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಅಂದ ಹಾಗೆ ಸರಕಾರದ ಈ ಕ್ರಮ ಇದೇ ಮೊದಲ ಸಲವಲ್ಲ. 2017ರಲ್ಲಿ ಮೂತ್ರ ಸೇರಿದಂತೆ ಆಕಳುಗಳ ಉತ್ಪನ್ನಗಳ ಬಗ್ಗೆ ವೈಜ್ಞಾನಿಕವಾಗಿ ದೃಢೀಕೃತ ಸಂಶೋಧನೆಯನ್ನು ನಡೆಸಲು 19 ಸದಸ್ಯರ ಸಮಿತಿಯೊಂದನ್ನು ಸರಕಾರವು ರಚಿಸಿತ್ತು.

ಆಕಳ ಸಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪದ ಮಿಶ್ರಣವಾಗಿರುವ ‘ಪಂಚಗವ್ಯ’ದ ಲಾಭಗಳನ್ನು ವೈಜ್ಞಾನಿಕವಾಗಿ ದೃಢೀಕರಿಸಲು ನೆರವಾಗುವ ಯೋಜನೆಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆಯನ್ನು ಈ ಸಮಿತಿಗೆ ಒಪ್ಪಿಸಲಾಗಿತ್ತು. ಯೋಜನೆಗಾಗಿ ಕನಿಷ್ಠ 50 ಪ್ರಸ್ತಾವಗಳು ಬಂದಿದ್ದವು. ಆದರೆ ಯೋಜನೆ ಮಾತ್ರ ಮೂಲೆಗುಂಪಾಗಿತ್ತು.

Leave a Reply

Your email address will not be published. Required fields are marked *

error: Content is protected !!