ಪೌರತ್ವ ಸಾಬೀತುಪಡಿಸಲ್ಲ-ಸಸಿಕಾಂತ್ ಸೆಂಥಿಲ್ ಗರಂ

ಮಂಗಳೂರು,ಡಿ.10:ಲೋಕಸಭೆಯಲ್ಲಿ ಮಧ್ಯರಾತ್ರಿ ಮಂಡನೆಯಾದ ಪೌರತ್ವ ತಿದ್ದುಪಡಿ ಮಸೂದೆಯನ್ನು ಖಂಡಿಸಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್. ಸಸಿಕಾಂತ್ ಸೆಂಥಿಲ್ ಅವರು ವಿಧೇಯಕದ ವಿರುದ್ಧ ಗೃಹ ಸಚಿವ ಅಮಿತ್ ಷಾಗೆ ತೀಕ್ಷ್ಣವಾದ ಪತ್ರ ಬರೆದಿದ್ದಾರೆ.

‘ಸಿಎಬಿ(ಪೌರತ್ವ ಮಸೂದೆ) ಅಂಗೀಕಾರವಾದ ದಿನ “ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿದೆ” ಎಂದು ಅವರು ಅಮಿತ್ ಷಾ ಅವರಿಗೆ ಬರೆದ ಪತ್ರದಲ್ಲಿ ಖಂಡಿಸಿದ್ದಾರೆ.
” ತಾನು ಪೌರತ್ವ ಮಸೂದೆಯನ್ನು ಸ್ವೀಕರಿಸುವುದಿಲ್ಲ, ಭಾರತೀಯನೆಂದು ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವುದಿಲ್ಲ ಮತ್ತು ನನ್ನ ಅಸಹಕಾರಕ್ಕಾಗಿ ಭಾರತ ದೇಶವು ನನ್ನ ಮೇಲೆ ಕ್ರಮ ಕೈಗೊಂಡರೆ ಸ್ವೀಕರಿಸುತ್ತೇನೆ” ಎಂದು ಸೆಂಥಿಲ್ ಹೇಳಿದ್ದಾರೆ.

ಗೃಹ ಸಚಿವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಸೆಂಥಿಲ್ “ಈ ದೇಶದಲ್ಲಿ ಹುಟ್ಟಿ ಬೆಳೆದು ನಾನು ನನ್ನ ಪೌರತ್ವ ಸಾಬೀತುಪಡಿಸಬೇಕಾಗಿರುವುದು ದುರಾದೃಷ್ಟಕರ. ನನ್ನ ಪೌರತ್ವವನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸದೆ ಎನ್ಆರ್ ಸಿ ಗಣತಿಗೆ ಅಸಹಕಾರ ನೀಡುತ್ತೇನೆ. ಒಂದುವೇಳೆ ನಾನು ಈ ದೇಶದ ನಾಗರೀಕನಲ್ಲ ಎಂದು ಗುರುತಿಸಿದರೆ ನೀವು ನಿರ್ಮಿಸುತ್ತಿರುವ ಅನೇಕ “ವಲಸೆ ಕೇಂದ್ರ” ಭರ್ತಿ ಮಾಡಲು ನನಗೆ ಸಂತೋಷವಾಗುತ್ತದೆ. ಯಾಕೆಂದರೆ ಸರ್ಕಾರ ದೇಶದಾದ್ಯಂತ ಪ್ರತಿ ಹೆಜ್ಜೆಗೂ ಇಂತಹ ಕೇಂದ್ರಗಳನ್ನು ತೆರೆಯಬೇಕಾದಿತು. ಹೀಗಾಗಿ ಜನ ವಿರೋಧಿ ಮಸೂದೆಯ ಬಗ್ಗೆ ಮೌನವಾಗಿರುವುದಕ್ಕಿಂತ ಇದನ್ನು ವಿರೋಧಿಸಿ ನೀವು ಕೈಗೊಳ್ಳುವ ಕ್ರಮವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ “.

” ಮಸೂದೆಯನ್ನು ಮಂಡಿಸುವ ಮೂಲಕ ನಿಮ್ಮ ಸರ್ಕಾರ ದ್ವೇಷದ ಮೂಲ ಸಿದ್ಧಾಂತವನ್ನು ಬಹಿರಂಗಪಡಿಸಿದೆ. ಒಂದೇ ದೇಶದಲ್ಲಿ ವಾಸವಾಗಿದ್ದ ನಮ್ಮ ಮುಸ್ಲಿಂ ಮತ್ತು ಆದಿವಾಸಿ ಸಹೋದರ ಸಹೋದರಿಯರಿಗೆ ದೇಶದ ಜಾತ್ಯತೀತ ನೀತಿಗಳ ಬಗ್ಗೆ ಅವರಿಗಿದ್ದ ಭಯವನ್ನು ನೀಗಿಸಲು ಈ ಮಸೂದೆ ಯಶಸ್ವಿಯಾಗಲಿಲ್ಲ ಎಂಬ ಬಗ್ಗೆ ನನಗೆ ಸಂಪೂರ್ಣವಾಗಿ ಲಜ್ಜೆಗೀಡು ಮಾಡಿದೆ” ಎಂದು ಬರೆದುಕೊಂಡಿದ್ದಾರೆ.

“ಮಸೂದೆ ವಿರೋಧಿಸುವ ಕಾರಣ ಹಲವಾರು ನಾಗರಿಕತ್ವ ಕಳೆದುಕೊಳ್ಳಲಿದ್ದು, ನಿಮ್ಮ ಅಜೆಂಡಾ ಯಶಸ್ವಿಯಾಗುವ ಮುನ್ನ ನಿಮ್ಮ ವಲಸೆ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು ನಾನೊಬ್ಬ ಮಾಜಿ ಐಎಎಸ್ ಅಧಿಕಾರಿಯಾಗಿ ಸಲಹೆ ನೀಡುತ್ತೇನೆ. ನಮ್ಮನ್ನು ವಿಭಜಿಸುವ ನಿಮ್ಮೆಲ್ಲಾ ಪ್ರಯತ್ನಗಳ ವಿರುದ್ಧ ಮುಂದಿನ ದಿನಗಳಲ್ಲಿ ದೇಶದ ಜನ ಒಬ್ಬರಿಗೊಬ್ಬರು ಕೈಜೋಡಿಸಿ , ಹೋರಾಡಲಿದ್ದಾರೆ ಎಂದು ನಿಮಗೆ ಅರಿವಾಗಲಿದೆ” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!