ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಸ್ಸಾಂನಲ್ಲಿ ಬಂದ್

ಗುವಾಹತಿ, ಡಿ.10:- ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘ(ಎಎಎಸ್‍ಯು) ಸೇರಿದಂತೆ ಈಶಾನ್ಯ ಭಾಗದ ವಿದ್ಯಾರ್ಥಿ ಒಕ್ಕೂಟಗಳ ವೇದಿಕೆಯಾದ ಈಶಾನ್ಯ ವಿದ್ಯಾರ್ಥಿ ಒಕ್ಕೂಟ (ಎನ್‍ಇಎಸ್‍ಒ) ಕರೆ ನೀಡಿರುವ 11 ತಾಸಿನ ಬಂದ್‍ನಿಂದಾಗಿ ಅಸ್ಸಾಂನಲ್ಲಿ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಬಂದ್ ಅನ್ನು ಬೆಂಬಲಿಸಿವೆ. ಟೈರ್‍ಗಳನ್ನು ಸುಡುವುದರ ಮೂಲಕ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ ರಸ್ತೆಗಳನ್ನು ಪ್ರತಿಭಟನಾಕಾರರು ಮುಚ್ಚಿದ್ದಾರೆ.
ಅನೇಕ ಕಡೆ ರೈಲ್ವೆ ಹಳಿಗಳ ಮೇಲೆ ಕೂತು ಪ್ರತಿಭಟನಾಕಾರರು ಧರಣಿ ನಡೆಸಿದ್ದರಿಂದ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ಹಿಂಸಾಚಾರಕ್ಕೆ ಯತ್ನಿಸಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ಪೊಲೀಸ್ ಬಲ ಪ್ರಯೋಗದಲ್ಲಿ ಅನೇಕರಿಗೆ ಗಾಯಗಳಾಗಿವೆ. ಕೆಲವೆಡೆ ಕಲ್ಲು ತೂರಾಟದಲ್ಲಿ ಪೊಲೀಸರೂ ಸಹ ಗಾಯಗೊಂಡಿದ್ದಾರೆ. ರಾಜಧಾನಿ ಗುವಾಹತಿಯಲ್ಲಿ ಭಾರೀ ಪ್ರತಿಭಟನೆಗಳಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಬಂದ್‍ನಿಂದಾಗಿ ವಾಹನಗಳ ಸಂಚಾರ ವಿರಳವಾಗಿತ್ತು. ಲೋಯರ್ ಮತ್ತು ಅಪ್ಪರ್ ಅಸ್ಸಾಂನ ಅನೇಕ ನಗರಗಳಲ್ಲೂ ಇದೇ ಪರಿಸ್ಥಿತಿ ಕಂಡುಬಂತು. ಬಂಗಾಳಿ ಪ್ರಾಬಲ್ಯವಿರುವ ಕಚಾರ್, ಕರೀಂಗಂಜ್ ಮತ್ತು ಹೈಲಾಕಂಡಿ ಹಾಗೂ ಪರ್ವತ ಜಿಲ್ಲೆಗಳಾದ ಕರ್ಬಿ, ಅಂಗ್‍ಲಾಂಗ್ ಮತ್ತು ದಿಮಾ ಹಸಾವೋ ಜಿಲ್ಲೆಗಳಲ್ಲೂ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಮಣಿಪುರದ ರಾಜಧಾನಿ ಇಂಫಾಲ ಮತ್ತು ತ್ರಿಪುರಾ ಕ್ಯಾಪಿಟಲ್ ಸಿಟಿ ಅಗರ್ತಲಾ ಸೇರಿದಂತೆ ಹಲವೆಡೆ ಬಂದ್ ವೇಳೆ ಅಹಿತಕರ ಘಟನೆಗಳು ನಡೆದಿವೆ. ಮಾರುಕಟ್ಟೆಗಳು ಮತ್ತು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಶೈಕ್ಷಣಿಕ ಸಂಸ್ಥೆಗಳನ್ನು ಬಲವಂತವಾಗಿ ಪ್ರತಿಭಟನಾಕಾರರು ಮುಚ್ಚಿಸಿದ್ದರು. ಈ ಎರಡೂ ರಾಜ್ಯಗಳಲ್ಲೂ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಿದೆ.

ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮೇಘಾಲಯವನ್ನು ಈ ಮಸೂದೆ ವ್ಯಾಪ್ತಿಯಿಂದ ಹೊರಗೆ ಇಟ್ಟಿರುವುದರಿಂದ ಅಲ್ಲಿ ಯಾವುದೇ ಪ್ರತಿಭಟನೆಗಳು ವ್ಯಕ್ತವಾಗಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳದಿಂದ ಸಂತ್ರಸ್ತರಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ(ಹಿಂದು, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಕ್ರೈಸ್ತರು) ಭಾರತದಲ್ಲಿ ನಾಗರಿಕತ್ವ ಒದಗಿಸಲು ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಇದೆ. ನಿನ್ನೆ ಲೋಕಸಭೆಯಲ್ಲಿ ದೀರ್ಘಾವಧಿ ಚರ್ಚೆ ಬಳಿಕ ಈ ವಿಧೇಯಕವನ್ನು ಮಧ್ಯ ರಾತ್ರಿ ಅಂಗೀಕರಿಸಲಾಯಿತು.

ಇದು ವಿವಾದಿತ ಮಸೂದೆಯಾಗಿದ್ದು. ಇದು ಜಾರಿಗೆ ಬಂದರೆ ಈಶಾನ್ಯ ರಾಜ್ಯದ ಅಲ್ಪಸಂಖ್ಯಾತರಿಗೆ ಮತ್ತು ಮೂಲ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳೂ ಸಹ ತೀವ್ರ ವಿರೋಧ ವ್ಯಕ್ತಪಡಿಸಿವೆ.

Leave a Reply

Your email address will not be published. Required fields are marked *

error: Content is protected !!