janadhvani

Kannada Online News Paper

ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದ ವಿಶ್ವ ವಿಮೋಚಕ ಪ್ರವಾದಿ (ﷺ)

ಕಾರ್ಗತ್ತಲಿನಿಂದ ಕೂಡಿದ ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದವರಾಗಿದ್ದರು ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ)ರವರು.

ಹುಟ್ಟಿದ ಮಗು ಹೆಣ್ಣಂದರಿತ ಕೂಡಲೇ ಜೀವಂತವಾಗಿ ಹೂತು ಹಾಕಲ್ಪಡುತ್ತಿದ್ದ ಸಮೂಹದ ನಡುವೆ ಹೆಣ್ಣು ನಿಮ್ಮ ಮನೆಗೆ ಶಾಪವಲ್ಲ ,ಹೆಣ್ಣು ಮಗು ನಿಮ್ಮ ಮನೆಯ ಬೆಳಕು ಅಂತ ಜಗತ್ತಿಗೆ ಸಾರಿ ಹೇಳಿದ ವಿಶ್ವ ಪ್ರವಾದಿ (ﷺ) ರವರು ತಾಯಿಯ ಕಾಲಡಿಯಲ್ಲಾಗಿದೆ ಸ್ವರ್ಗ. ನಿಮ್ಮ ಆಸ್ತಿಯಲ್ಲಿ ಹೆಣ್ಣಿಗೂ ಪಾಲು ನೀಡಬೇಕೆಂದು ಕಲಿಸಿಕೊಟ್ಟರು.

ಪ್ರಸಕ್ತವಾಗಿ ಇಸ್ಲಾಮಿನಲ್ಲಿ ಸ್ತ್ರೀ ಶೋಷಣೆಗೊಳಪಡುತ್ತಿದ್ದಾಳೆ ಅನ್ನುವಂತಹ ಅರ್ಥವಿಲ್ಲದ ಕೂಗಿಗೆ ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ)ರವರು ಉತ್ತರವನ್ನು ಕಂಡುಕೊಂಡು, ಆಕೆಗೆ ಮಾಣಿಕ್ಯಗಿಂತಲೂ ಅಧಿಕವಾದ ಸ್ಥಾನಮಾನವನ್ನು ನೀಡಿ ಗೌರವಿಸಿದೆ.
ಇಂದಿಗೂ ಋತುಮತಿಯಾದ ಹೆಣ್ಣನ್ನು ಮನೆಯ ಹೊರಗಡೆ ಮಲಗಿಸುವ ಅಮಾನವೀಯ ಪದ್ದತಿ, ಗಂಡ ಮರಣ ಹೊಂದಿದರೆ ಜೀವನ ಪರ್ಯಂತ ವಿಧವೆಯಾಗಿ ಜೀವಿಸುವಂತಹ ವ್ಯವಸ್ಥೆ ಜಾರಿಯಲ್ಲಿದ್ದರೂ, ತ್ವಲಾಕ್ ನ ಸಾಧಕ, ಬಾಧಕಗಳ ಕುರಿತೂ, ತ್ವಲಾಕ್ ನ ರೂಪಗಳನ್ನು ತಿಳಿಯುವ ಪ್ರಯತ್ನ ನಡೆಸದೆ ಇಸ್ಲಾಮಿನಲ್ಲಿ ಸ್ತ್ರೀ ಸ್ವಾತಂತ್ರ್ಯವಿಲ್ಲ ಎಂದು ವಾದ ನಡೆಸುವವರು ಪ್ರವಾದಿ (ﷺ) ರವರು ಜಗತ್ತಿಗೆ ತೋರಿಸಿಕೊಟ್ಟ ಮಾದರೀಯೋಗ್ಯ ನಡೆ, ಮಹಿಳೆಯರಿಗೆ ಕಲ್ಪಿಸಿದ ಸ್ಥಾನಮಾನಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.

ನಿನ್ನ ನೆರೆಯವನು ಹಸಿದಿರುವಾಗ (ಅವನೊಬ್ಬ ಸಹೋದರ ಧರ್ಮೀಯನಾಗಿದ್ದರೂ ) ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ ಎಂದು ಕಲಿಸಿಕೊಟ್ಟಾಗ ನಿನ್ನ ನೆರೆಯಲ್ಲಿ ಹಸಿದಿರುವನು ಮುಸ್ಲಿಮನಾಗಿದ್ದರೆ ಮಾತ್ರ ನೀನು ಸಹಾಯ ಮಾಡು ಎಂದು ಕಲಿಸಿಕೊಟ್ಟಿಲ್ಲ. ಆತ ಯಾವುದೇ ಧರ್ಮವನಾಗಿದ್ದರೂ ನೀನು ಆತನಿಗೆ ಸಹಾಯ ಮಾಡು ಎಂದು ಕಲಿಸಿಕೊಡುವುದರ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದರು.

ದೇಶದೆಲ್ಲೆಡೆ ಧರ್ಮ ಧರ್ಮಗಳ ಹೆಸರೇಳಿ ಕೊಲೆಪಾತಕಗಳು ಅಧಿಕವಾಗಿತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯರಿಗೆ ಮನುಷ್ಯತ್ವವು ಮರೀಚಿಕೆಯಾಗಿಯೇ ಉಳಿದಿದೆ.
ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ) ರವರು ಮುನ್ನೆಚ್ಚರಿಕೆ ನೀಡಿದ್ದರು. ಅದೊಂದು ಕಾಲ ಬರಲಿದೆ ಅಂದು ಕೊಲೆಗೈಯುವವನಿಗೆ ಗೊತ್ತಿರಲಿಕ್ಕಿಲ್ಲ ನಾನು ಯಾಕೆ ಕೊಲೆಗೈಯುತ್ತಿದ್ದೇನೆಂದು, ಕೊಲೆಗೈಯಲ್ಪಟ್ಟವನಿಗೆ ನಾನು ಯಾಕೆ ಕೊಲೆಗೈಯಲ್ಪಡುತ್ತಿದ್ದೇನೆ ಅಂತ ಗೊತ್ತಿರುವುದಿಲ್ಲ ಅನ್ನುವ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.

ವರ್ಣ ಭೇದ ದ ಹೆಸರಿನಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಕರಿಯನಾದ ಬಿಲಾಲ್ ರ.ಅ ರವರನ್ನು ಮಸೀದಿಯಲ್ಲಿ ಬಾಂಗ್ ಕರೆ ನೀಡಲು ಆಜ್ಞಾಪಿಸಿ ಕರಿಯನಿಗೂ – ಬಿಳಿಯನಿಗೂ, ಬಡವನಿಗೂ – ಶ್ರೀಮಂತನಿಗೂ ಒಂದೇ ಸ್ಥಾನಮಾನವನ್ನು ನೀಡಿ ವರ್ಣಭೇದ ನೀತಿಗೆ ಅಂತ್ಯ ಹಾಡಿದರು. ಇಂದಿಗೂ ಮಸೀದಿಗಳಲ್ಲಿ ಬಡವ -ಶ್ರೀಮಂತ ,ಕರಿಯ -ಬಿಳಿಯ ಅನ್ನುವ ತಾರತಮ್ಯವಿಲ್ಲದೆ ಪರಸ್ಪರ ಭುಜಕ್ಕೆ ಭುಜ ಸೇರಿಸಿ ನಮಾಝ್ ಮಾಡುವ ದೃಶ್ಯಗಳನ್ನು ಕಾಣಿಸಲು ಸಾಧ್ಯವಿದೆ.

ಒಬ್ಬ ನಿರಪರಾಧಿಯನ್ನು ಕೊಂದರೆ ಸಕಲ ಮಾನವ ಕುಲವನ್ನೇ ಕೊಂದಂತೆ ಅನ್ನುವಂತಹ ಎಚ್ಚರಿಕೆಯ ಸಂದೇಶವನ್ನು ನೀಡಿ ಮನುಷ್ಯ ಮನಸ್ಸುಗಳ ನಡುವಿನ ಸಂಬಂಧಗಳ ಕುರಿತಾದ ಮಹತ್ವವನ್ನು ಈ ಜಗತ್ತಿನ ಮುಂದೆ ತೆರೆದಿಟ್ಟಿದ್ದರು.

ಕಾರ್ಮಿಕನ ಬೆವರು ಆರುವ ಮುನ್ನವೇ ಆತನಿಗೆ ಆತನ ದುಡಿಮೆಯ ವೇತನವನ್ನು ನೀಡಿ ಎಂದು ಆಜ್ಞಾಪಿಸಿದ್ದು ಪ್ರವಾದಿ (ﷺ) ರವರು ಕಾರ್ಮಿಕ ವರ್ಗದ ಭವನೆಯನ್ನು ಅರ್ಥೈಸಿಕೊಂಡಾಗಿತ್ತು
ಇಂದು ದೇಶದೆಲ್ಲೆಡೆ ಕಾರ್ಮಿಕ ವರ್ಗವು ಬೀದಿ ಬೀದಿಗಳಲ್ಲಿ ತಮಗೆ ಅನುಕೂಲವಾದ ವೇತನವನ್ನು ನೀಡಬೇಕೆಂದು ಪ್ರತಿಭಟಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ) ರವರು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದಾರೆ.

ತನ್ನ ಕರುಳಕುಡಿಯಾದ ಫಾತಿಮಾ ರ.ಅ ಕದ್ದರೂ ಆಕೆಯ ಕೈಯನ್ನು ಕಡಿಯದೆ ಬಿಡಲಾರೆ ಎಂದು ಖಡಾ ಖಂಡಿತವಾಗಿ ಹೇಳಿದ ಪ್ರವಾದಿ (ﷺ) ರವರು ನ್ಯಾಯ ಪಾಲನೆಯಲ್ಲಿ ಎಂದೂ ತಾರತಮ್ಯದ ನೀತಿಯನ್ನು ಅನುಸರಿಸಿದವರಲ್ಲ.

ಅಲ್ ಅಮೀನ್ ಅನ್ನುವ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ﷺ) ರವರ ಜನ್ಮ ದಿನ ಮುಸ್ಲಿಂ ಜಗತ್ತಿಗೆ ಮಗದೊಮ್ಮೆ ಆಗತವಾದಾಗ ಪ್ರವಾದಿ (ﷺ) ರವರ ಆದರ್ಶ ,ಅವರು ಕಲಿಸಿಕೊಟ್ಟ ಹಾದಿಯನ್ನು ತಿಳಿಸಿಕೊಡುವ ಪ್ರಯತ್ನ ನಡೆಯಬೇಕಿದೆ. ಪ್ರವಾದಿ (ﷺ) ರವರನ್ನು ಪ್ರೀತಿಸುವುದು, ಅವರ ಕೀರ್ತನೆಗಳನ್ನು ಹೇಳುವುದು,ಅವರ ಚರ್ಯೆಗಳನ್ನು ಪಾಲಿಸುವುದು ಒಬ್ಬ ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಇಲ್ಲಿನ ಕೆಲವೊಂದು ಪತ್ರಿಕೆಗಳು, ಇನ್ನು ಕೆಲವು ಸಂಘಟನೆಗಳು ಪ್ರವಾದಿ (ﷺ) ರವನ್ನು ನಿಂದಿಸಿದ ಮಾತ್ರಕ್ಕೆ ಇಲ್ಲಿ ಇಸ್ಲಾಮಿನ ಬೆಳವಣಿಗೆಯನ್ನೋ, ಪ್ರವಾದಿ (ﷺ) ರವರ ಮೇಲಿನ ಪ್ರೀತಿಯನ್ನೋ ಇಲ್ಲವಾಗಿಸಲು ಸಾಧ್ಯವಿಲ್ಲ.

ಪ್ರವಾದಿ(ﷺ) ರವರನ್ನು ಯಾರೆಲ್ಲಾ ವಿಮರ್ಷಿಸಲು ಪ್ರಯತ್ನಿಸುತ್ತಾರೋ ಆವಾಗಲೆಲ್ಲಾ ಜನತೆ ಆ ಪ್ರವಾದಿಯನ್ನು ಅರಿಯಲು ಪ್ರಯತ್ನಿಸುತ್ತದೆ. ಪರಿಣಾಮ ಅವರು ಆ ಪ್ರವಾದಿ (ﷺ) ರವರ ಆದರ್ಶದಲ್ಲಿ ಸತ್ಯವನ್ನು ಮನಗಂಡು ಇಸ್ಲಾಮಿನತ್ತ ಆಕರ್ಷಿತರಾಗುತ್ತಿದ್ದಾರೆ.
ಕೇವಲ ಒಂದು ತಿಂಗಳಿಗೋ, ಅಥವಾ ದಿನದ ಮಟ್ಟಿಗೋ ಪ್ರವಾದಿ ಪ್ರೇಮಿಗಳಾಗಿ ಮೆರೆಯದೆ. ಪ್ರವಾದಿ(ﷺ) ರವರು ಕಲಿಸಿಕೊಟ್ಟ ಸತ್ಯದ ಹಾದಿಯನ್ನು, ಆದರ್ಶವನ್ನು ಮೈಗೂಡಿಸಿಕೊಂಡು ಜೀವಿಸಿ, ನೈಜ ಪ್ರವಾದಿ ಪ್ರೇಮಿಗಳಾಗಿ, ಯಾರಿಗೂ ತೊಂದರೆ, ಅನ್ಯಾಯಗಳಾಗದೆ ಪ್ರವಾದಿ (ﷺ) ರ ಜನ್ಮದಿವನ್ನು ಕೊಂಡಾಡೋಣ. ನಾಡಿನ ಸರ್ವ ಬಾಂಧವರಿಗೂ ಈದ್ ಮೀಲಾದ್ ಶುಭಾಶಯಗಳು.

ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದ ವಿಶ್ವ ವಿಮೋಚಕ ಪ್ರವಾದಿ (ﷺ).

ಲೇಖನ: ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com