janadhvani

Kannada Online News Paper

ಬಾಬರಿ ಮಸೀದಿ ಪ್ರಕರಣ- ನಾಳೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ನವದೆಹಲಿ, ನ 8:ಅಯೋಧ್ಯೆ ಬಾಬ್ರಿ ಮಸೀದಿ – ರಾಮ ಜನ್ಮಭೂಮಿ ಪ್ರಕರಣದ ಬಹು ನಿರೀಕ್ಷಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಶನಿವಾರವೇ ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿಭದ್ರತೆ ಏರ್ಪಾಡು ಮಾಡಲಾಗಿದೆ.

ಇದೇ 17 ರಂದು ಮುಖ್ಯನ್ಯಾಯಮೂರ್ತಿ ರಂಜನ್ ಗೋಗಾಯ್ ಅಧಿಕಾರದಿಂದ ನಿವೃತ್ತಿಯಾಗಲಿದ್ದು 17 ರೊಳಗೆ ತೀರ್ಪು ಪ್ರಕಟವಾಗುವುದಾಗಿ ಹೇಳಲಾಗಿತ್ತು. ಆದರೆ ಅಚ್ಚರಿ ಎಂಬಂತೆ ನಾಳೆಯೇ ಈ ತೀರ್ಪು ಪ್ರಕಟವಾಗಲಿದೆ. 2.77 ಎಕರೆ ವಿವಾದಾತ್ಮಕ ಜಮೀನಿನ ಒಡೆತನ ಯಾರಿಗೆ ಸೇರಬೇಕು ? ಎಂಬ ವಿಚಾರದಲ್ಲಿ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ ನಾಳೆ ನ 9 ರಂದು ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಯೋಧ್ಯೆಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗ 2.77 ಎಕರೆ ವಿವಾದಾತ್ಮಕ ಭೂಮಿಯ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದು ಶನಿವಾರದ ತೀರ್ಪಿನಲ್ಲಿ ಪ್ರಕಟವಾಗಲಿದೆ.

ಬಾಬರಿ ಮಸೀದಿ ನಿರ್ಮಾಣಕ್ಕೂ ಮೊದಲು ಇಲ್ಲಿ ರಾಮನ ದೇವಾಲಯವಿತ್ತು, ಹೀಗಾಗಿ ಇದು ಹಿಂದೂಗಳಿಗೆ ಸೇರಬೇಕು ಎಂಬುದು ಹಿಂದೂಗಳ ವಾದವಾಗಿದೆ. ಆದರೆ ಬಾಬರಿ ಮಸೀದಿ ಜಾಗ ತಮ್ಮದೇ, “ನಮ್ಮ ಆಸ್ತಿಯಾಗಿಯೇ ಉಳಿಯಬೇಕು” ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದವಾಗಿತ್ತು.

ಆದ್ಯತೆಯ ಮೇರೆಗೆ ಎರಡು ತಿಂಗಳಿಂದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡ ಪೀಠ ಆದ್ಯತೆಯ ಮೇಲೆ ವಿಚಾರಣೆ ಮಾಡಿ ತೀರ್ಪನ್ನು ಕಾಯ್ದಿರಿಸಿತ್ತು.

ಈ 2.77 ಎಕರೆ ಜಾಗ ತಮಗೂ ಸೇರಿದೆ ಎಂದು ನಿರ್ಮೋಹಿ ಅಖಾಡ ಹೇಳಿಕೊಂಡು ಹಕ್ಕು ಮಂಡನೆ ಮಾಡಿದೆ. 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಈ ಮೂವರಿಗೂ (ಮೂರೂ ಅರ್ಜಿದಾರರಿಗೂ) ವಿವಾದಿತ ಭೂಮಿಯನ್ನು ಸಮನಾಗಿ ಹಂಚುವ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಹಿಂದೂ ಸಂಸ್ಥೆಯಾಗಲೀ, ಸುನ್ನಿ ವಕ್ಫ್ ಮಂಡಳಿಯಾಗಲೀ, ಇಲ್ಲವೇ ನಿರ್ಮೋಹಿ ಅಖಾಡವಾಗಲೀ ಸರ್ವಸಮ್ಮತವಾಗಿ ಒಪ್ಪಿಕೊಳ್ಳದೇ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದವು. ವಾದ – ಪ್ರತಿವಾದ ಮುಗಿದು 17 ರಂದು ಪ್ರಕಟವಾಗಬೇಕಿದ್ದ ಬಾಬರಿ ಮಸೀದಿ ದಶಕಗಳ ವಿವಾದದ ಅಂತಿಮ ತೀರ್ಪು ನಾಳೆಯೇ ಪ್ರಕಟವಾಗಲಿದೆ.

16 ನೇ ಶತಮಾನದಲ್ಲಿ ರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಹಿಂದೂಗಳ ವಾದವಾಗಿದೆ. 1992 ರಲ್ಲಿ ಕರ ಸೇವಕರು ನಡೆಸಿದ ಹಿಂಸಾಚಾರದಿಂದ ಬಾಬರಿ ಮಸೀದಿ ಧ್ವಂಸವಾಗಿತ್ತು.ಈ ಭೂ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರ ಪೀಠ ಶನಿವಾರದಂದು ತೀರ್ಪು ಪ್ರಕಟಿಸಲಿದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!