janadhvani

Kannada Online News Paper

ಜಾಲತಾಣದಲ್ಲಿ ಹಬ್ಬಿದ ಸುದ್ದಿ ಸುಳ್ಳು, ಬ್ಯಾಂಕುಗಳನ್ನು ಮುಚ್ಚುವುದಿಲ್ಲ-ಆರ್ಬಿಐ ಸ್ಪಷ್ಟನೆ

ಮುಂಬೈ .ಸೆ,25: ದೇಶದಲ್ಲಿರುವ ಒಂಭತ್ತು ವಾಣಿಜ್ಯ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸಂಪೂರ್ಣವಾಗಿ ಅಲ್ಲಗಳೆದಿದೆ. ಮತ್ತು ಈ ಮಾಹಿತಿ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಆರ್ಬಿಐ, ವಾಣಿಜ್ಯ ಬ್ಯಾಂಕುಗಳನ್ನು ಆರ್ಬಿಐ ಮುಚ್ಚಲಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದೆ.

ಜೊತೆಗೆ ಕೇಂದ್ರ ಹಣಕಾಸು ಕಾರ್ಯದರ್ಶಿ ರಾಜೀವ್ ಕೂಡ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ, ಇಂತಹ ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು. ಬಂಡವಾಳ ಪುನರ್ಧನದ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಮತ್ತು ಮಹಾರಾಷ್ಟ್ರಸಹಕಾರಿ ಬ್ಯಾಂಕುಗಳ ವಿರುದ್ಧ ಆರ್.ಬಿ.ಐ. ಕಠಿಣ ಕ್ರಮಗಳನ್ನು ತೆಗೆದುಕೊಂಡ ಬಳಿಕ ಆರ್.ಬಿ.ಐ. ಒಂಭತ್ತು ವಾಣಿಜ್ಯ ಬ್ಯಾಂಕುಗಳನ್ನು ಶಾಶ್ವತವಾಗಿ ಮುಚ್ಚಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತು ಮತ್ತು ಇದರಿಂದ ಜನರು ಭಾರೀ ಗೊಂದಲ ಮತ್ತು ಭೀತಿಗೊಳಗಾಗಿದ್ದರು.

ಕಾರ್ಪೊರೇಶನ್ ಬ್ಯಾಂಕ್, ಯೂಕೋ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಆರ್.ಬಿ.ಐ. ತನ್ನ ಹೇಳಿಕೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com