ಕುಸಿಯುತ್ತಿರುವ ಭಾರತದ ಆರ್ಥಿಕತೆ

ಒಂದು ದೇಶದ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರ ವಹಿಸುವುದು, ಆ ದೇಶದ ಆರ್ಥಿಕ ವ್ಯವಸ್ಥೆ.
ಆರ್ಥಿಕ ವ್ಯವಸ್ಥೆ ಸುಭದ್ರವಾಗಿದ್ದಲ್ಲಿ ಆ ದೇಶದ‌ ಜನರ ಜೀವನ ಸುಗಮವಾಗಿ ಸಾಗುತ್ತಿರುತ್ತದೆ. ಒಂದು ವೇಳೆ ಆರ್ಥಿಕ ವ್ಯವಸ್ಥೆ ಕುಸಿತ ಕಂಡದ್ದೇ ಆದಲ್ಲಿ, ಅದು ಆ ದೇಶದ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಅನೇಕ ರಾಷ್ಟ್ರಗಳು ಇಂತಹದ್ದೆ ಸಮಸ್ಯೆಯನ್ನು ಎದುರಿಸಿದ್ದು, ಈಗ ಭಾರತ ಕೂಡ ಆ ಸಾಲಿಗೆ ಸೇರುತ್ತಿದೆ. ಭಾರತದ ಆರ್ಥಿಕ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಒಂದು ಶ್ರೀಮಂತ ರಾಷ್ಟವಾಗಿತ್ತು. ಈ ಸಂಪದ್ಭರಿತ ರಾಷ್ಟ್ರದ ಮೇಲೆ ಕಣ್ಣಿಟ್ಟ ಪಾಶ್ಚಾತ್ಯ ರಾಷ್ಟ್ರಗಳು ಒಂದರ ಮೇಲೆ ಒಂದರಂತೆ ಭಾರತಕ್ಕೆ ದಾಳಿ ಮಾಡಿ ಇಲ್ಲಿನ ಸಂಪತ್ತನ್ನು ದೋಚಿ ಹೋಗಿದ್ದವು. ಇಷ್ಟೆಲ್ಲಾ ಆದರೂ ಸ್ವಾತಂತ್ರ್ಯ ನಂತರ ಭಾರತ ತನ್ನ ಸಾಮರ್ಥ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಯೊಂದಿಗೆ ಅಭಿವೃದ್ಧಿಯ ಪತವನ್ನು ಹಿಡಿದಿತ್ತು. ಅಂತಾರಾಷ್ಟ್ರೀಯ ಮಟ್ಟದ ಏಳನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟವಾಗಿತ್ತು.

1947 ರಿಂದ 2014 ರ ವರೆಗೆ ಭಾತರದ ಆರ್ಥಿಕ ವ್ಯವಸ್ಥೆ ಸಣ್ಣ ಮಟ್ಟಿನ ಏರಿಳಿತ ಕಂಡಿದ್ದರೂ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಇಂದು ಭಾರತದ ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಕುಸಿದಿದೆ ಎಂದರೆ, ಹಲವಾರು ದೊಡ್ಡ ದೊಡ್ಡ ಕಂಪೆನಿಗಳು ಉದ್ಯಮ ನಡೆಸಲಾಗದೆ, ಮುಚ್ಚುವ ಹಂತಕ್ಕೆ ತಲುಪಿದೆ. ಸರ್ಕಾರವಂತೂ ಹಿಂದಿನ ಎಲ್ಲಾ ಸರ್ಕಾರವನ್ನೂ ಮೀರಿಸಿ ಭಾರತದ ಸರ್ವೋಚ್ಚ ಬ್ಯಾಂಕ್ , ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಮೀಸಲಾಗಿಟ್ಟಿದ್ದ ಸರಿಸುಮಾರು 1.76 ಲಕ್ಷ ಕೋಟಿ ಹಣವನ್ನು ತನ್ನ ಒಡೆತನಕ್ಕೆ ತೆಗೆದುಕೊಂಡಿದೆ.

ಇನ್ನೊಂದು ಮುಖ್ಯ ಅಂಶ ಏನೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತದ ನಿರುದ್ಯೋಗ ಸೂಚ್ಯಾಂಕ 6.1 ಶೇಕಡಾವಾರು ಏರಿಕೆಯಾಗಿದೆ. ಇದು ಕಳೆದ 45 ವರ್ಷಗಳಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ಏರಿಕೆಯಾಗಿರುವುದು. ವಾಹನಗಳ ಮಾರಾಟ ಉದ್ಯಮ 36 ಶೇಕಡಾವಾರು ಇಳಿಕೆಯಾಗಿದೆ. ಇದರ ಪರಿಣಾಮ 3.50ಲಕ್ಷ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಕುಸಿತಕ್ಕೆ ಬ್ಯಾಂಕಿಂಗ್ ಕ್ಷೇತ್ರಗಳೂ ಪರೋಕ್ಷ ಕಾರಣವಾಗಿದೆ. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ಸರಕಾರಕ್ಕೆ 2017ರಲ್ಲಿ ಕೊಟ್ಟ ವರದಿಯ ಪ್ರಕಾರ 100ದೊಡ್ಡ ಕಂಪೆನಿಗಳು ಭಾರತದ ಬ್ಯಾಂಕುಗಳಿಗೆ ಏನಿಲ್ಲವೆಂದರೂ 11ಲಕ್ಷ ಕೋಟಿ ರೂಪಾಯಿಗಳಷ್ಟು ನಾಮ ಹಾಕಿವೆ.

ಆದರೆ ಈ ವರದಿಯನ್ನು ಸರಕಾರ ಮುಚ್ಚು ಹಾಕಿತ್ತು. ಕೊಟ್ಟ ಹಣ ವಾಪಸ್ ಬರದೇ ಇದ್ದುದರಿಂದ, ಸಾಲ ಕೊಟ್ಟ ರಾಷ್ಟ್ರೀಕೃತ ಬ್ಯಾಂಕುಗಳು ಇಂದು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ಬಿಕ್ಕಟ್ಟು ಕೇವಲ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಇಡೀ ಆರ್ಥಿಕತೆಗೆ ಹರಡಿಕೊಂಡಿದೆ. ಇದನ್ನು ಮರೆಮಾಚಲು ಇಂದು ಸರಕಾರ ಬ್ಯಾಂಕುಗಳ ವಿಲೀನ ಕಾರ್ಯಕ್ಕೆ ಮುಂದಾಗಿದೆ.

ಆರ್ಥಿಕತೆ ಕಷ್ಟ ಎದುರಿಸುತ್ತಿರಲು ಪ್ರಧಾನ ಕಾರಣ ಬೇಡಿಕೆಯ ಬಿಕ್ಕಟ್ಟು. ಅಂದರೆ ಗ್ರಾಹಕ ವಸ್ತುಗಳನ್ನು ಕೊಳ್ಳಲು ಜನರ ಬಳಿ ಹಣವಿಲ್ಲ. ಆದರೆ ಸರಕಾರವು ಅದನ್ನು ಮರೆಮಾಚಿ ಅದನ್ನು ಹೂಡಿಕೆಯ ಬಿಕ್ಕಟ್ಟು ಎಂದು ಹೇಳುತ್ತಿದೆ. ಎಂದರೆ ದೊಡ್ಡ ಉದ್ಯಮಗಳು ಆರ್ಥಿಕತೆಯಲ್ಲೂ ಹಣ ಹೂಡಲು ಬೇಕಾದ ಸಾಲ ಬಂಡವಾಳ ದೊರೆಯದೇ ಇರುವುದರಿಂದ ಆರ್ಥಿಕ ಬಿಕ್ಕಟ್ಟು ಸಂಭವಿಸಿದೆ ಎಂದು ಸರಕಾರ ಹೇಳುತ್ತಿವೆ‌.

ಈ ಮೂಲಕ ಎನ್’ಪಿಎ ಎಂಬ ಕಾರ್ಪೊರೇಟ್ ಉದ್ಯಮಪತಿಗಳ ಪಾಪದ ಹೊರೆಯನ್ನು ಲಾಭದಾಯಕ ಸಾರ್ವಜನಿಕ ಕಂಪೆನಿಗಳಿಗೆ, ಲಾಭದಲ್ಲಿರುವ ಬ್ಯಾಂಕುಗಳಿಗೆ ಹಾಗೂ ಗ್ರಾಹಕರ ಮೇಲೆ ವರ್ಗಾಯಿಸಲು ಪ್ರಾರಂಭಿಸುತ್ತಿವೆ.

ಆರ್ಥಿಕತೆಯಲ್ಲಿ ಅನಿವಾಸಿ ಭಾರತೀಯರು :
ಅನಿವಾಸಿ ಭಾರತೀಯರು ಭಾರತದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ. ಪ್ರಪಂಚದ ನಾನಾ ದೇಶಗಳಲ್ಲಿ ತಮ್ಮ ಉದ್ಯಮ , ಉದ್ಯೋಗವನ್ನು ನಡೆಸಿ, ತಮ್ಮ ಕುಟುಂಬ ನಿರ್ವಹಣೆಗಾಗಿ ಹಾಗೂ ಇತರ ಚಟುವಟಿಕೆಗಳಿಗಾಗಿ ತಾವು ಗಳಿಸುವ ಹಣವನ್ನು ಭಾರತಕ್ಕೆ ಕಳುಹಿಸುತ್ತಾರೆ. ಇದು ಒಂದು ರೀತಿಯಲ್ಲಿ ಭಾರತಕ್ಕೆ ಒಳಬರುವ ವಿದೇಶಿ ಬಂಡವಾಳ ಆಗಿದೆ.

ಅನಿವಾಸಿಗಳಿಂದ ಭಾರತಕ್ಕೆ ಒಂದು ವರ್ಷಕ್ಕೆ ಬರುವ ಮೊತ್ತ ಸರಿಸುಮಾರು 70ಬಿಲಿಯನ್ ಡಾಲರ್ ಅಂದರೆ 4.2ಲಕ್ಷ ಕೋಟಿ ರೂಪಾಯಿಗಳು. ಒಂದು ವರ್ಷದಲ್ಲಿ ಭಾರತ ಸರಕಾರದ ಖರ್ಚಿನ ಯೋಜನೆ 94 ಬಿಲಿಯನ್ ಡಾಲರ್. ಅಂದರೆ ಅನಿವಾಸಿಗಳ ಪಾಲು 75%ಶೇಕಡಾವರುಗಳಿಗಿಂತಲೂ ಅಧಿಕವಾಗಿದೆ. ಇಷ್ಟೊಂದು ಕೊಡುಗೆ ನೀಡುವ ಅನಿವಾಸಿಗಳಿಗೆ ಭಾರತದ ಆರ್ಥಿಕ ಕುಸಿತ ಹೇಗೆ ಪರಿಣಾಮ ಬೀರುತ್ತದೆ ಎಂದು ನೋಡುತ್ತಾ ಹೋದಲ್ಲಿ ನಮಗೆ ಬಹಳಷ್ಟು ವಿಷಯಗಳು ಗೋಚರಿಸಬಹುದು.

ಅದರಲ್ಲಿ ಬಹಳ ಸರಳರೂಪದಲ್ಲಿ ನಮಗೆ ಗೋಚರಿಸುವುದು ಏನೆಂದರೆ “ಹಣದ ಮೌಲ್ಯ ಕಡಿಮೆಯಾಗಿ, ಖರ್ಚಿನ ಪ್ರಮಾಣ ಅಧಿಕವಾಗುವುದು”. ವಿದೇಶಗಳಲ್ಲಿ ಅಲ್ಲಿನ ಹಣಕ್ಕೆ ವಿನಿಮಯವಾಗಿ ಸಿಗುವ ಭಾರತದ ರೂಪಾಯಿಯ ಪ್ರಮಾಣ ಅಧಿಕವಾಗಿರಬಹುದು.

ಆದರೆ ಅದಕ್ಕಿಂತ ಎರಡುಪಟ್ಟು ಹೆಚ್ಚು ಭಾರತದಲ್ಲಿ ಬೆಲೆಯೇರಿಕೆ ಆಗುತ್ತದೆ. ಭವಿಷ್ಯದ ಕಣಸುಗಳನ್ನು ನನಸಾಗಿಸಲು ವಿದೇಶೀ ಭೂಮಿಗೆ ಪ್ರಯಾಣ ಬೆಳೆಸಿದ ಅನಿವಾಸಿ ಭಾರತೀಯರಿಗೆ ಇದು ನುಂಗಲಾರದ ತುತ್ತಾಗಿ ಬಿಡುತ್ತದೆ. ಆರ್ಥಿಕ ಕುಸಿತ ಅನಿವಾಸಿಗಳಲ್ಲಿ , ಅದರಲ್ಲೂ ವಿದೇಶಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವವರಿಗೆ ಹಾಗೂ ಕಡಿಮೆ ವೇತನ ಹೊಂದಿರುವವರಿಗೆ ಬಹಳ ದೊಡ್ಡ ಹೊಡೆತ ಬೀಳುತ್ತದೆ.

ಹೀಗೆ ಕಳೆದ ಹಲವಾರು ದಶಕಗಳಲ್ಲಿ ಕಾಣದ ಕೇಳರಿಯದ ಭಾರತದ ಆರ್ಥಿಕ ಕುಸಿತ ಪ್ರಸ್ತುತವಾಗಿ ತಲೆದೋರಿದೆ. ಇದು ಇದೇ ರೀತಿ ಮುಂದುವರಿದದ್ದೇ ಆದಲ್ಲಿ, ಸುಂದರ ಭಾರತ ದೇಶ ನಮ್ಮ ಊಹೆಗೂ ಮೀರಿದ ಕೊಳ್ಳೆ ಹೊಡೆಯುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುತ್ತದೋ ಎಂಬ ಆತಂಕ ಎಲ್ಲರ ಮನದಲ್ಲಿ ಮೂಡಿದೆ. ಇನ್ನಾದರೂ ನಮ್ಮ ಸರಕಾರ ಏನೂ ನಡೆದಿಲ್ಲ ಎಂಬ ಮುಚ್ಚುಮರೆಯನ್ನು ಬಿಟ್ಟು, ಕೆಟ್ಟ ರಾಜಕೀಯವನ್ನು ತೊರೆದು ಎಚ್ಚೆತ್ತುಕೊಳ್ಳಲಿ. ಪ್ರಜಾಪ್ರಭುತ್ವ ರಾಷ್ಟ್ರದ ಜನರೂ ನಾವೂ ಕೂಡ ಜಾತಿ ಮತ ಭೇದ ಎಂಬೂದನ್ನು ಬಿಟ್ಟು , ರಾಷ್ಟ್ರದ ಏಳಿಗೆಗೆ ಸಹಕಾರಿಯಾಗುವ, ಜನರ ಜೀವನೋಪಾಯಕ್ಕೆ ಒತ್ತು ನೀಡುವ ಒಂದು ಸುಭದ್ರ ಆಡಳಿತ ನಡೆಸುವ ಸರಕಾರವನ್ನೇ ಆರಿಸಬೇಕು. ಹಾಗಾಗಿದ್ದಲ್ಲಿ ಮಾತ್ರ ಈ ಭವ್ಯ ಭಾರತದ ಕಣಸು ನನಸಾಗಬಹುದು.

ಹಸೈನಾರ್ ಕಾಟಿಪಳ್ಳ
ಕೆ.ಸಿ.ಎಫ್.ಖತ್ತರ್

Leave a Reply

Your email address will not be published. Required fields are marked *

error: Content is protected !!