janadhvani

Kannada Online News Paper

ಅಮಾಯಕ ವ್ಯಕ್ತಿಗೆ ಉಗ್ರನ ಪಟ್ಟ: ಸರಕಾರ ಸ್ಪಷ್ಟನೆ ನೀಡಬೇಕು-ಯು.ಟಿ.ಖಾದರ್

ಮಂಗಳೂರು, ಆ.20: ಬೆಳ್ತಂಗಡಿಯ ವ್ಯಕ್ತಿಯೊಬ್ಬ ಸೆಟಲೈಟ್ ಫೋನ್‌ನಿಂದ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾನೆಂಬ ಸುಳ್ಳು ಸುದ್ದಿ ಪ್ರಕಟಿಸುವ ಮೂಲಕ ಅಮಾಯಕ ವ್ಯಕ್ತಿಯೊಬ್ಬನಿಗೆ ಉಗ್ರನ ಪಟ್ಟ ಕಟ್ಟಿ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿರುವ ಕುರಿತಂತೆ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಅಮಾಯಕ ಅಬ್ದುಲ್ ರವೂಫ್ ಜತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈತ ನನಗೆ ಪರಿಚಯಸ್ಥ ಯುವಕ. ಚೆನ್ನಾಗಿ ಪರಿಚಯವಿದೆ. ಇಂತಹವರಿಗೆ ಈ ರೀತಿಯ ಗತಿಯಾದರೆ ಏನೂ ಪರಿಚಯ ಇಲ್ಲದವರ ಬಗ್ಗೆ ಈ ರೀತಿಯ ಅನುಮಾನ, ಅವಮಾನ ಎದುರಾದಾಗ ಅವರಿಗೆ ನ್ಯಾಯಕ್ಕಾಗಿ ಪರ ವಹಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಲಿದೆ ಎಂದರು.

ಎನ್‌ಐಎ ರಾಷ್ಟ್ರೀಯ ಭದ್ರತಾ ಸಂಸ್ಥೆ. ದೇಶದ ಭದ್ರತೆ ಕುರಿತಂತೆ ಯಾವುದೇ ರೀತಿಯ ವಿಚಾರಣೆ ತನಿಖೆಯೂ ತಪ್ಪಲ್ಲ. ಆದರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅಮಾಯಕರ ಬಾಳಿನಲ್ಲಿ ಚೆಲ್ಲಾಟವಾಡುವಾಗ ಜವಾಬ್ದ್ಧಾರಿಯುತ ಸ್ಥಾನದಲ್ಲಿರುವವರು ಸ್ಪಷ್ಟನೆ ನೀಡಬೇಕು. ಎನ್‌ಐಎ ದೊಡ್ಡ ತನಿಖಾ ಸಂಸ್ಥೆ. ಇಂತಹ ಸಂಸ್ಥೆಗೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳಬೇಕು. ಇಂತಹ ಸಂಸ್ಥೆಗಳು ತನಿಖೆ ವಿಚಾರಣೆ ನಡೆಸುವಂತಹ ಸಂದರ್ಭ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕೃತವಾಗಿ ಹೇಳಿಕೆ ನೀಡುವಂತಾಗಬೇಕು. ಈ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಠಾಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲ ಎಂದಿರುವಾಗಲೂ ಅವರಿಗಿಂತ ದೊಡ್ಡ ಮೂಲಗಳು ಯಾವುದೇ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಗೋವಿಂದೂರಿನಲ್ಲಿ ದೊಡ್ಡ ಬಂಗಲೆ ನಿರ್ಮಿಸಿದ್ದಾನೆ ಎಂಬ ವದಂತಿಗಳೂ ಹಬ್ಬಿಸಲಾಗಿತ್ತು. ಆದರೆ ನಾನು ಅಬ್ದುಲ್ ರವೂಫ್ ಈ ಅಮಾಯಕ ಎಂದು ತಿಳಿದ ಮೇಲೆ ವಿಚಾರಿಸಿದಾಗ ಆತ ಕಟ್ಟಿರುವುದು 1,000 ಚದರ ಅಡಿಯ ಮನೆ. ಅದೂ ಅವರ ಹುಟ್ಟೂರಿನಲ್ಲಿ. ಆತನ ತಾಯಿಯ ಮನೆ ಆ ಹೊಸ ಮನೆಯ ಪಕ್ಕದಲ್ಲೇ ಇದೆ. ಆ ಮನೆಗಾಗಿ ನೆರವಿಗೆ ರವೂಫ್ ನನ್ನ ಬಳಿಗೇ ಮೂರು ಬಾರಿ ಬಂದಿದ್ದರು. ಮಂಜನಾಡಿಯ ಅಲ್ ಮದೀನಾ ಯತೀಂ ಖಾನದಲ್ಲಿ ಸಹಾಯಕ ಧರ್ಮಗುರುಗಳಾಗಿದ್ದ ವೇಳೆ ಅವರನ್ನು ನೋಡಲು ಬರುತ್ತಿದ್ದ ಕೆಲವರಿಂದ ಆರ್ಥಿಕ ಸಹಾಯವನ್ನು ಪಡೆದು ಆ ಮನೆಯನ್ನು ನಿರ್ಮಿಸಿದ್ದಾರೆ. ಅದೂ ಇನ್ನೂ ಅದರ ನೆಲದ ಕೆಲಸ ಬಾಕಿ ಇದೆ. ಸೆಟಲೈಟ್ ಕರೆ ಎಂದರೇನೆಂದೇ ಆತನಿಗೆ ತಿಳಿದಿಲ್ಲ. ಹಾಗಿರುವಾಗ ಈ ರೀತಿ ಅಪಪ್ರಚಾರ ಮಾಡಿರುವ ಬಗ್ಗೆ ತನಿಖೆಯಾಗಬೇಕು ಎಂದು ಖಾದರ್ ಹೇಳಿದರು.

ದ.ಕ. ಜಿಲ್ಲೆ ಕೋಮು ಸೂಕ್ಷ್ಮ ಜಿಲ್ಲೆ. ಇಲ್ಲಿಗೆ ಈಗಾಗಲೇ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳಿಗೆ ಹೊರ ಊರುಗಳಿಂದ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೂಡಿಕೆಗೂ ಮುಂದಾಗುತ್ತಿಲ್ಲ. ಅಧಿಕಾರಿಗಳು ಇಲ್ಲಿಗೆ ಬರಲು ಸಿದ್ಧರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಸುಳ್ಳು ಸುದ್ದಿ ಜಿಲ್ಲೆಯ ಬಗ್ಗೆ ಕೆಟ್ಟ ಸಂದೇಶವನ್ನು ನೀಡುತ್ತದೆ. ಇದಕ್ಕೆ ಯಾರೂ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ರಾಷ್ಟ್ರದ ಭದ್ರತೆ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು. ಅಪರಿಚಿತರು ವಸತಿ ಪ್ರದೇಶ, ಅಂಗಡಿಗಳಿಗೆ ಬರುವಾಗ ಅವರನ್ನು ಸಾಮಾನ್ಯವಾಗಿ ವಿಚಾರಿಸಿಕೊಳ್ಳುವಂತಹ ಪರಿಪಾಠ ಬೆಳೆಸಿಕೊಳ್ಳಬೇಕು. ಅಪರಿಚಿತರಿಗೆ ಬಾಡಿಗೆಗೆ ಮನೆ ನೀಡುವ ಸಂದರ್ಭ ಹಣಕ್ಕಿಂತಲೂ ಮುಖ್ಯವಾಗಿ ಅವರ ಹಿನ್ನೆಲೆ ತಿಳಿಯಬೇಕು. ಮಾಹಿತಿಯನ್ನು ಸ್ಥಳೀಯ ಠಾಣೆಗೆ ತಿಳಿಸಬೇಕು. ಪೊಲೀಸ್ ಠಾಣೆಗಳಿಂದಲೂ ಸ್ಪಷ್ಟ ಮಾಹಿತಿ ಪಡೆಯಬೇಕು. ಇದಕ್ಕಾಗಿ ಎಲ್ಲರೂ ಸಹಕಾರ ನೀಡುತ್ತಾರೆ. ಹಿಂದೆಯೂ ನೀಡಿದ್ದಾರೆ. ಆದರೆ ಈರೀತಿ ಜನ ಭಯಪಡುವ, ಗೊಂದಲ ಪಡುವ ವಿಚಾರ ಸೃಷ್ಟಿಸಲು ಅವಕಾಶ ನೀಡಬಾರದು ಎಂದು ಯು.ಟಿ.ಖಾದರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಈಶ್ವರ್ ಉಳ್ಳಾಲ್ ಉಪಸ್ಥಿತರಿದ್ದರು.


ಸೂಕ್ತ ತನಿಖೆ ಆಗಲಿ: ಅಬ್ದುಲ್ ರವೂಫ್

 ‘‘ನಾನು ಕಳೆದ 16 ವರ್ಷಗಳಿಂದ ಮಂಜನಾಡಿಯಲ್ಲಿದ್ದೇನೆ. ಒಂದು ವರ್ಷದ ಹಿಂದೆ ನನ್ನ ಹುಟ್ಟೂರಿನಲ್ಲಿ ಮನೆ ಕಟ್ಟಿಸಿದ್ದೇನೆ. ನನ್ನ ಹೆಂಡತಿಗೆ ಹೆರಿಗೆ ಆಗಿರುವುದರಿಂದ ಮನೆ ಖಾಲಿ ಇದೆ. ಆ ಊರಿನಲ್ಲಿ ಎಲ್ಲರಿಗೂ ನನ್ನ ಪರಿಚಯ ಇದೆ. ತಂದೆ ನಿಧನದ ಬಳಿಕ 12 ವರ್ಷದವನಿದ್ದಾಗ ನನ್ನನ್ನು ಮಂಜನಾಡಿ ಅಲ್ ಮದೀನಾಕ್ಕೆ ಸೇರಿಸಲಾಗಿತ್ತು. ಅಲ್ಲೇ ಶಿಕ್ಷಣ ಮುಗಿಸಿ ವೃತ್ತಿ ಮುಂದುವರಿಸಿದ್ದೇನೆ. ನನ್ನ ಗುರುಗಳು ನಿಧನರಾದ ಶಾಸ್ತ್ರವೇ ಮುಗಿದಿಲ್ಲ. ನಾನಿನ್ನೂ ಆ ದುಃಖದಲ್ಲೇ ಇದ್ದೇನೆ. ಅದರ ಮಧ್ಯೆ ಈ ವಿಚಾರದಿಂದ ನನಗೆ ಹಾಗೂ ನನ್ನ ಮನೆಯವರಿಗೆ ತುಂಬಾ ನೋವಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ವೌಖಿಕವಾಗಿ ದೂರು ನೀಡಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು. ಈ ರೀತಿ ಇನ್ಯಾರಿಗೂ ಆಗಬಾರದು’’ ಎಂದು ಅಬ್ದುಲ್ ರವೂಫ್ ಹೇಳಿದರು.

error: Content is protected !! Not allowed copy content from janadhvani.com