janadhvani

Kannada Online News Paper

ಯವ್ವನವನ್ನು ನಾಡಿಗಾಗಿ ನಾಳೆಗಾಗಿ ಸಮರ್ಪಿಸಲು ಎಸ್‌ವೈಎಸ್ ‌ನಲ್ಲಿ ಸೇರೋಣ

ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ

—————

“ನನ್ನ ಸಮುದಾಯದ ಎರಡು ವಿಭಾಗವು ಉತ್ತಮವಾದರೆ ಈ ಸಮಾಜವು ಉತ್ತಮವಾಗುವುದು. ಅವರು ಕೆಟ್ಟರೆ ಸಮಾಜವೇ ಕೆಡುಕಿನತ್ತ ವಾಲುವುದು ಅವರು ಉಲಮಾಗಳು ಮತ್ತು ಉಮರಾಗಳು” ಎಂಬ ಪುಣ್ಯ ಪ್ರವಾದಿವರ್ಯ(ಸ)ರವರ ನುಡಿಯು ಎಷ್ಟೊಂದು ಪರ್ಫೆಕ್ಟ್ ಎಂಬುದನ್ನು ತಿಳಿಯಲು ಬೇರೆಯವರ ವಿವರಣೆಯನ್ನು ಕೇಳಬೇಕಾಗಿಲ್ಲ. ಇಲ್ಲಿನ ಕಾರ್ಯಾಚರಣೆಗಳನ್ನು ಮಾತ್ರ ಗಮನಿಸಿದರೆ ಎಲ್ಲವೂ ಸೂರ್ಯನಂತೆ ಸ್ಪಷ್ಟ.!

ಅಲ್ಲಾಹನ ಪ್ರವಾದಿವರ್ಯ (ಸ)ರ ಉತ್ತರಾಧಿಕಾರಿಗಳೆಂಬ ಹಣೆಪಟ್ಟಿಯೊಂದಿಗೆ ಸಮಾಜದಲ್ಲಿ ಗುರುತಿಸಲ್ಪಡುವ ವಿಭಾಗವಾದ ವಿದ್ವಾಂಸರು, ಪವಿತ್ರ ಇಸ್ಲಾಮಿನ ಪ್ರಭೋಧಕರಾಗಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿದ ಪರಿಣಾಮ ಹಿಂದಿನಿಂದಲೂ ಅವರ ಮಾತಿಗೆ ಸಮಾಜವೇ ಅನುಮೋದನೆ ನೀಡುತ್ತಾ ಬಂದಿರುತ್ತದೆ. ಧರ್ಮದ ಯಾವುದೇ ವಿಷಯಗಳಲ್ಲೂ ಉಲಮಾಗಳ ಫತ್ವಾಗಳಿಗೆ ಮಾತ್ರ ಇಲ್ಲಿ ಮನ್ನಣೆ ಸಿಗುತ್ತದೆ. ಕಾರಣ ಬೇರೇನೂ ಅಲ್ಲ, ಅವರು ಪ್ರವಾದಿವರ್ಯರ ಹಿಂಬಾಲಕರು. ಪವಿತ್ರ ದೀನಿನ ತಿರುಳನ್ನು ನಮ್ಮೆಡೆಗೆ ತಲುಪಿಸಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ದವರು ಕೂಡಾ ಉಲಮಾಗಳೇ ಆಗಿರುವರು.

*ಸುನ್ನೀ ಸಂಘಟನೆಗಳ ರಚನೆ*

ಪವಿತ್ರ ಇಸ್ಲಾಮಿನ ಪ್ರಗತಿಪಥದಲ್ಲಿ ಕೈಜೋಡಿಸಲು ಎಲ್ಲರಿಂದಲೂ ಆಗಬೇಕು. ಅದು ಒಂದೇ ವೇದಿಕೆಯಿಂದ ಮಾತ್ರ ಸಾಧ್ಯವಾಗುವಂಥದ್ದೂ ಅಲ್ಲ. ಕಾರಣ ಇಲ್ಲಿರುವವರೆಲ್ಲರೂ ವಿದ್ವಾಂಸರಲ್ಲ. ವಿದ್ವಾಂಸರಲ್ಲಿರುವ ಎಲ್ಲರೂ ಅಗಾಧ ಜ್ಞಾನವನ್ನು ಕರಗತ ಮಾಡಿದವರಲ್ಲ. ವಿದ್ವಾಂಸರೇತರಲ್ಲೂ ಒಂದೇ ಪ್ರಾಯದವರು ಮಾತ್ರ ಇರುವುದಲ್ಲ. ಮಕ್ಕಳು, ವಿದ್ಯಾರ್ಥಿಗಳು, ಯುವಜನರು, ವೃದ್ಧರು….. ಹೀಗೆ ವಿವಿಧ ಪ್ರಾಯಗಳಲ್ಲಿ ಬದುಕುವ ಜನರಿಗೆ ಪ್ರಬೋಧನಾ ರಂಗ ಕೂಡ ವಿಭಿನ್ನವಾಗಿರ ಬೇಕಾದುದು ಅಗತ್ಯವೇ ಸೈ.

ಇದೆಲ್ಲವನ್ನೂ ಮನದಟ್ಟು ಮಾಡಿದ ನಮ್ಮ ಪೂರ್ವಿಕ ನಾಯಕರು ಕಂಡುಕೊಂಡ ವಿಧಾನವೇ ವಿವಿಧ ಸಂಘಟನೆಗಳು. ಸರಿಯಾದ ಪಥವನ್ನು ತಿಳಿಸಿಕೊಟ್ಟು ಒಳಿತಿನ ವಾಹಕರನ್ನು ಬೆಳೆಸಲು ಎಸ್‌ಜೆಯು, ಮದ್ರಸಾ ರಂಗದ ಅಭಿವೃದ್ಧಿಯತ್ತ ಗಮನ ಹರಿಸಿ, ವಿದ್ಯಾರ್ಥಿಗಳ ಪಾಲಿಗೆ ಬೆಳಕು ನೀಡುತ್ತಾ ಪ್ರವರ್ತರಾಗಲು ಎಸ್‌ಜೆಎಂ, ಮೊಹಲ್ಲಾ ಆಡಳಿತದೊಂದಿಗೆ ಸಮಾಜದ ಬೇಡಿಕೆಗಳಿಗೆ ಸ್ಪಂದಿಸಿ ಮುನ್ನಡೆಯಲು ಎಸ್ಎಮ್ಎ, ಯುವಜನತೆಯು ತಪ್ಪುದಾರಿಯತ್ತ ಸುಳಿಯುವುದನ್ನು ತಡೆಯುವುದರೊಂದಿಗೆ ಅವರಲ್ಲಿ ದೀನೀ ಪ್ರಜ್ಞೆಯನ್ನು ಕಾಪಾಡಲು ಎಸ್‌ವೈಎಸ್, ನೈತಿಕತೆಯ ಮೇರೆ ಮೀರದಂತೆ ಬದುಕಿ, ಧಾರ್ಮಿಕ ಕ್ರಾಂತಿಯನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ಎಸ್‌ಎಸ್ಎಫ್, ವಿದ್ಯಾಭ್ಯಾಸದೊಂದಿಗೆ ಬೋಧನೆಯನ್ನು ಉಂಟುಮಾಡಲು ಮಕ್ಕಳಿಗಾಗಿ ಎಸ್‌ಬಿಎಸ್… ಇಲ್ಲಿ ಜನ್ಮ ತಾಳಿದವು. ಇವುಗಳೆಲ್ಲಾ ಪ್ರಗತಿಯೆಡೆಗೆ ಮುನ್ನಡೆಯುತ್ತಾ ದೈನಂದಿನವಾಗಿ ಸಮಾಜದ ಬೇಡಿಕೆಗಳಾಗಿ ಜನರ ಹೃದಯದಲ್ಲಿ ಭದ್ರವಾಗಿ ಬೇರೂರಿವೆ.

*ಸುನ್ನೀ ಯುವಜನ ಸಂಘ*

1954 ರಲ್ಲಿ ಕೇರಳದ ಮಣ್ಣಿನಲ್ಲಿ ಜನ್ಮತಾಳಿದ ಸುನ್ನೀ ಯುವಜನತೆಯ ಆಶಾಕಿರಣವಾದ SჄS ಇಂದು ಕನ್ನಡ ನಾಡಿನಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುವುದನ್ನು ಕಾಣುವಾಗ ಅಭಿಮಾನವಾಗುತ್ತದೆ. ದೀನೀ ರಂಗದಲ್ಲಿ ಎಲ್ಲದಕ್ಕೂ ಕೇರಳವನ್ನು ಆಶ್ರಯಿಸುವ ನಾವು, ದಶಕಗಳ ಹಿಂದೆ ಸುನ್ನೀ ಯುವಜನ ಸಂಘಕ್ಕೆ ರೂಪುರೇಷೆ ನೀಡಿದಾಗ ಕನ್ನಡಿಗರು ತುಂಬಾ ಆವೇಶದಿಂದ ಸ್ವಾಗತಿಸಿದರು. ಇದರ ಹಲವು ಘಟಕಗಳು ರಚನೆಯಾಗ ತೊಡಗಿದವು. ಕನ್ನಡ ರಾಜ್ಯದ ಹತ್ತಾರು ಜಿಲ್ಲೆಗಳಲ್ಲೂ ಸಮಿತಿಗಳು ಅಸ್ಥಿತ್ವಕ್ಕೆ ಬಂತು. ಅದರೊಂದಿಗೆ ಕರ್ನಾಟಕದಲ್ಲಿಯೂ SჄS ಅನಿವಾರ್ಯವಾದ ಸಂಘಟನೆಯೆಂಬುದನ್ನು ಜನರು ಅಂಗೀಕರಿಸಿದರು.

ಹೊಸ ಸಂವಿಧಾನ ಪ್ರಕಾರ 34ರ ಹರೆಯಕ್ಕೆ ಕಾಲಿಡುವ ಸುನ್ನೀ ಯುವಜನರು SჄSನಲ್ಲಿ ಸೇರ್ಪಡೆಯಾಗಬಹುದು. ಕೆಟ್ಟ ಪರಿಸರಗಳು ಕೈಬೀಸಿ ಕೆಡುಕಿನತ್ತ ಕರೆಯುವಾಗ ರಕ್ಷಣೆಗೆ ನಿಲ್ಲಲು SჄS ಅಗತ್ಯವಾಗಿದೆ. ಯವ್ವನವು ಮನುಷ್ಯ ಬದುಕಿನ ಪ್ರಮುಖವಾದ ಘಟ್ಟವಾಗಿದೆ. ಸ್ವಂತಿಕೆಯನ್ನು ಮೈಗೂಡಿಸಿಕೊಂಡಾಗ ಮನಸ್ಸು ಬಯಸಿದ್ದನ್ನು ಮಾಡಿ ಮುಗಿಸಲು ಹಾತೊರೆಯುವವರೇ ಅಧಿಕ ಜನರು. ಇಂತಹ ಸನ್ನಿವೇಶಗಳನ್ನು ಮೆಟ್ಟಿನಿಂತು ಮುನ್ನಡೆಯಲು SჄS ಯುವಜನರಿಗೆ ದಾರಿ ತೋರಿಸುತ್ತದೆ.

ದಯೆ ಮತ್ತು ಕರುಣೆಯ ಬತ್ತಿಗಳು ನಂದಿ ಹೋದ ಈಗಿನ ಕಾಲದಲ್ಲಿ ಆಶ್ವಾಸನೆಯೊಂದಿಗೆ ಆಸರೆಯನ್ನೂ ನೀಡಲು ಈ ಸಂಘಟನೆಯಿಂದ ಪ್ರೋತ್ಸಾಹ ಮತ್ತು ಪ್ರೇರಣೆಗಳು ಸಿಗುತ್ತದೆ. ಅದರೊಂದಿಗೆ ಧಾರ್ಮಿಕ ಜಾಗೃತಿಯನ್ನು ಕೈಗೆತ್ತಿಕೊಂಡು ಬದುಕು ಸವೆಸಲು ಯವ್ವನ ತುಂಬಿ ತುಳುಕುವ ಬದುಕಿಗೆ ಬೆಳಕು ಮೂಡಿಸುತ್ತದೆ. ಒಟ್ಟಿನಲ್ಲಿ SჄS ನವ ಯುಗದ ಬಹು ಬೇಡಿಕೆಯಾಗಿ ಮಾರ್ಪಟ್ಟಿದೆ.

*ಸದಸ್ಯತ್ವ ಅಭಿಯಾನ-2019*

ಆಗಸ್ಟ್ 25 ಭಾನುವಾರದಂದು ಕರ್ನಾಟಕದಲ್ಲಿ ಸುನ್ನೀ ಯುವಜನ ಸಂಘದಲ್ಲಿ ಸೇರ್ಪಡೆಯಾಗುವ ದಿನವಾಗಿರುತ್ತದೆ. ಮೂವತ್ತನಾಲ್ಕನೇ ವಯಸ್ಸಿಗೆ ಕಾಲಿಟ್ಟ ಪವಿತ್ರ ಅಹ್ಲುಸ್ಸುನ್ನದ ಆಶಯಾದರ್ಶಗಳನ್ನು ಅಂಗೀಕರಿಸುವ ಯುವಜನರಿಗೆ ಇದರಲ್ಲಿ ಸೇರಬಹುದು. ಈ ತಿಂಗಳ 30ರ ತನಕದ ಆರು ದಿನಗಳಲ್ಲಿ ದೇಶ-ವಿದೇಶಗಳಲ್ಲಿರುವ ಎಲ್ಲರನ್ನೂ ಅವರದೇ ಸ್ವಂತ ಊರಿನಲ್ಲಿ ಸದಸ್ಯರಾಗಿಸಬೇಕು. ಸದಸ್ಯತನ ಶುಲ್ಕವಾಗಿ ಪ್ರತಿಯೊಬ್ಬರಿಂದಲೂ ನೂರು ರೂಪಾಯಿಯನ್ನು ಪಡೆಯಲಾಗುವುದು.

ಅಪೇಕ್ಷಾ ಫಾರಂಗಳನ್ನು ಭರ್ತಿಮಾಡಿ 31ನೇ ದಿನದಂದು ಸೆಂಟರ್ ನಾಯಕರ ಸಮಕ್ಷಮಕ್ಕೆ ತಲುಪಿಸಬೇಕು. ಅವರದನ್ನು SჄS ಚುನಾವಣಾ ಆಯೋಗಕ್ಕೆ ತಲುಪಿಸುವರು.
ರಾಜ್ಯ ಸಮಿತಿಯು ಪರಿಶೀಲನೆಯ ಬಳಿಕ ಮುಂದಿನ ದಿನಗಳಲ್ಲಿ ಪ್ರತೀ ಸದಸ್ಯರಿಗೂ ಐಡಿ ಕಾರ್ಡ್ ವಿತರಿಸಿ ಅವರನ್ನು ಸದಸ್ಯರಾಗಿ ಸ್ವೀಕರಿಸಿದ್ದನ್ನು ಸಾಬೀತುಪಡಿಸುತ್ತದೆ. ಮುಂದೆ, ಸೆಪ್ಟೆಂಬರ್ ಒಂದರಿಂದ ಮೂವತ್ತರ ತನಕದ ಅವಧಿಯಲ್ಲಿ ಸಂಘಟನೆಯ ಅತ್ಯಂತ ಕೆಳ ಘಟಕವಾದ ಬ್ರಾಂಚ್ ಸಮಿತಿಗಳಲ್ಲಿ ವಾರ್ಷಿಕ ಕೌನ್ಸಿಲ್‌ ನಡೆಸುವುದು.

ಸದಸ್ಯತ್ವ ಪಡೆದ ಎಲ್ಲರನ್ನೂ ಮೊದಲೇ ನಿಗದಿಪಡಿಸಿದ ದಿನದಂದು ಕಚೇರಿ ಅಥವಾ ಯಾವುದಾದರೂ ಒಂದೆಡೆ ಸೇರಿಸಿ ಮೇಲ್ಘಟಕದ ಉಸ್ತುವಾರಿಯ ನಾಯಕತ್ವದಲ್ಲಿ ಹೊಸ ಸಮಿತಿಯನ್ನು ರಚಿಸುವುದು.! ಕನ್ನಡ ನಾಡಿನ ಎಲ್ಲಾ ಪ್ರದೇಶಗಳಲ್ಲಿಯೂ SჄS ಘಟಕವನ್ನು ಸ್ಥಾಪಿಸಲು ಪ್ರಯತ್ನಿಸುವುದು ಈ ಕಾಲದ ಆವಶ್ಯಕತೆಯಾಗಿದೆ. ಹಲವು ರೀತಿಯ ಸಮಸ್ಯೆಗಳು ನಮ್ಮನ್ನು ಟಾರ್ಚರ್ ಮಾಡುತ್ತವೆ. ವಿದ್ವಾಂಸ ಶ್ರೇಷ್ಠರೂ ಉಮರಾ ಸಾತ್ವಿಕರೂ ನಾಯಕತ್ವ ನೀಡುವ SჄS ಎಂಬ ಮಹೋನ್ನತ ಸಂಘಟನೆಯಿಂದಲೇ ಇವುಗಳಿಗೆ ಪರಿಹಾರ ಸಾಧ್ಯ.!

*ಇಸಾಬದ ಮೂಲಕ ಸಾಂತ್ವನ*

ಸುನ್ನೀ ಯುವಜನ ಸಂಘದ ಹೊಸ ಉದಯವಾಗಿದೆ ಟೀಮ್ ಇಸಾಬ. ಸಮಾಜ ಸೇವೆಯನ್ನೇ ಪ್ರಮುಖ ಗುರಿಯಾಗಿಸಿರುವ ಪ್ರಸ್ತುತ ಸಂಘಟನೆಯು ಟೀಮ್ ಇಸಾಬ ಎಂಬ ಪ್ರತ್ಯೇಕ ತಂಡವನ್ನು ರಚಿಸಿ, ಎಲ್ಲಾ ಸಮಯದಲ್ಲಿಯೂ ಅವರನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿರುವುದು ಈ ತಂಡದ ವಿಶೇಷತೆಯಾಗಿದೆ. ಸ್ಥಳ ಮತ್ತು ಸಮಯಗಳನ್ನು ನೋಡದೇ ಜಾತಿ-ಮತ ಭೇದವಿಲ್ಲದೇ ಸಂಕಷ್ಟಗಳಲ್ಲಿ ಸಿಲುಕಿರುವವರನ್ನು ಸಂತೈಸಲು, ಅವರಿಗೆ ಸಾಂತ್ವನದ ಸಿಹಿ ನೀಡಲು, ಸಂರಕ್ಷಣೆಯಲ್ಲಿ ಸಹೋದ್ಯೋಗಿಯಾಗಲು ಟೀಮ್ ಇಸಾಬ ಸಜ್ಜಾಗಿದೆ.

ರಾಜ್ಯದ ಹಲವೆಡೆ ನೆರೆ ಹಾವಳಿಯಿಂದ ತತ್ತರಿಸಿರುವವರಿಗೆ ಸಹಾಯ ಮಾಡಲು ಈಗಾಗಲೇ ತಂಡದ ಸದಸ್ಯರು ಸಕ್ರಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರು ಕೂಡ ಎಸ್‌ವೈಎಸ್‌ನ ಕಾರ್ಯಾಚರಣೆಯನ್ನು ಮನತುಂಬಾ ಅಭಿನಂದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ತಂಡವು ನಮ್ಮ ನಾಡಿನ ಅವಿಭಾಜ್ಯ ಅಂಗವಾಗಿ ಬೆಳೆದು ಬರುವುದರಲ್ಲಿ ಸಂದೇಹವಿಲ್ಲ. ಸದ್ರಿ ಸಂಘಟನೆಯಲ್ಲಿ ಸೇರುವುದನ್ನು ಬಯಸಿ ಈಗಲೂ ಬಹಳಷ್ಟು ಯುವಜನರು ಅಪೇಕ್ಷೆ ನೀಡುವುದನ್ನು ಕಾಣುವಾಗ ಕಣ್ತುಂಬಿ ಬರುತ್ತದೆ. ಅಲ್ಲಾಹು ಎಲ್ಲವನ್ನೂ ನಮ್ಮಿಂದ ಸ್ವೀಕರಿಸಲಿ ಆಮೀನ್.

error: Content is protected !! Not allowed copy content from janadhvani.com