ದ.ಕ.ಜಿಲ್ಲೆಯಲ್ಲಿ ಬಕ್ರೀದ್ ಆಚರಣೆ- ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ

ಮಂಗಳೂರು.ಆ,12: ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅದ್’ಹಾ ಸಂಭ್ರಮವನ್ನು ದ.ಕ.ಜಿಲ್ಲೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.

ಮಂಗಳೂರು ನಗರ,ಉಳ್ಳಾಲ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬದ ಪ್ರಮುಖ ಮಸೀದಿ ಮತ್ತು ಈದ್ಗಾಹ್ ಗಳಲ್ಲಿ ಸಾಮೂಹಿಕ ಈದ್ ನಮಾಜ್ ಹಾಗೂ ಖುತ್ಬಾದಲ್ಲಿ ಭಾಗವಹಿಸಿದ ಮುಸ್ಲಿಮರು ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಅವರ ನೆರವಿಗಾಗಿ ದೇಣೆಗೆಯನ್ನು ಸಂಗ್ರಹಿಸಿದರು.

ಮಂಗಳೂರು ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಈದ್ ನಮಾಜ್ ಹಾಗೂ ಖುತ್ಬಾಕೆ ನೇತೃತ್ವ ನೀಡಿದರು.
‘ಏಕದೇವ ವಿಶ್ವಾಸದ ಸಮಾಜ ಸ್ಥಾಪನೆಗಾಗಿ ಪ್ರವಾದಿ ಇಬ್ರಾಹೀಮರು ಇಡೀ ಜೀವನವನ್ನೇ ಮುಡುಪಾಗಿರಿಸಿ, ಹಲವಾರು ಸವಾಲು ಸ್ವಪರೀಕ್ಷೆಗಳನ್ನು ಎದುರಿಸಿ, ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಸ್ವಂತ ಮಗನ ಬಲಿಯರ್ಪಿಸಲು ಹಿಂಜರಿದಿರಲಿಲ್ಲ. ಅವರ ಜೀವನ ಎಲ್ಲರಿಗೂ ಮಾದರಿಯಾಗಲಿ. ನೆರೆ ಹಾವಳಿಯ ಹಿನ್ನೆಲೆಯಲ್ಲಿ ಸರಳವಾಗಿ ಹಬ್ಬ ಆಚರಿಸುವಂತೆ’ ಖಾಝಿ ತಮ್ಮ ಈದ್ ಸಂದೇಶದಲ್ಲಿ ಹೇಳಿದರು.

ಮಾಜಿ ಸಚಿವ, ಶಾಸಕ ಯುಟಿ ಖಾದರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಯುಟಿ ಖಾದರ್, ನೆರೆ ಬಂದು ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇನ್ಮುಂದೆ ಇಂತಹ ಅನಾಹುತಗಳು ನಡೆಯದಿರಲಿ. ಎಲ್ಲರಿಗೂ ಸುಖ, ಶಾಂತಿ‌ ನೀಡಲೆಂದು ವಿಶೇಷವಾಗಿ ಪ್ರಾರ್ಥಿಸಿದ್ದೇವೆ ಎಂದು ಹೇಳಿ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಶುಭಾಶಯ ನೀಡಿದರು.

ಉಡುಪಿ, ಚಿಕಮಗಳೂರು, ಹಾಸನ ಜಿಲ್ಲಾ ಖಾಝಿಯವರಾದ ತಾಜುಲ್ ಪುಖಹಾಹ್ ಶೈಖುನಾ ಬೇಕಲ್ ಉಸ್ತಾದ್ ಮರಿಕ್ಕಳ ಮಸ್ಜಿದ್ ನಲ್ಲಿ ಈದ್ ನಮಾಝ್ ಗೆ ನೇತೃತ್ವ ನೀಡಿ,ಈದ್ ಖುತುಬ ನಿರ್ವಹಿಸಿದರು.ನೆರೆ ಸಂತ್ರಸ್ತರಿಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಿ ಅವರ ನೆರವಿಗಾಗಿ ಧಾವಿಸಿ ಎಂದು ಕರೆಯಿತ್ತರು.

ಉಳ್ಳಾಲದ ಸಯ್ಯದ್ ಮದನಿ ದರ್ಗಾ ಶರೀಫ್ ನಲ್ಲಿ ತ್ಯಾಗ ಬಲಿದಾನದ ಹಬ್ಬ ಬಕ್ರೀದನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಶಾಸಕ ಯು.ಟಿ ಖಾದರ್ ಸೇರಿದಂತೆ ಹಲವಾರು ಭಕ್ತಾದಿಗಳು ಈದ್ ನಮಾಜ್ನಲ್ಲಿ ಪಾಲ್ಗೊಂಡರು.ಖತೀಬರಾದ ಅಬ್ದುಲ್ ಅಝೀಝ್ ಬಾಖವಿ ಈದ್ ಖುತ್ಬಾ ಮತ್ತು ನಮಾಝ್ ನಿರ್ವಹಿಸಿದರು.ತ್ಯಾಗ ಬಲಿದಾನದ ಸಂಕೇತವಾಗಿರುವ ಈದುಲ್ ಅಝ್ಆ ಹಬ್ಬವನ್ನು ಪರಸ್ಪರ ಅರ್ಥ ಮಾಡಿಕೊಂಡು ಆಚರಿಸಬೇಕಾಗಿದೆ. ಜಾತಿ, ಧರ್ಮ ಇಲ್ಲದೇ ಪ್ರೀತಿ, ಸ್ನೇಹದಿಂದ ಎಲ್ಲಾ ವರ್ಗ ಸೇರಿ ಹಬ್ಬದ ಮಹತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ಈದುಲ್ ಅಝಾ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗ ಭೇಟಿ ನೀಡಿ ಪ್ರಾರ್ಥನೆ ಮಾಡಿದ ಬಳಿಕ ಮಾತನಾಡಿದರು.

ಬೆಳಗಾವಿ: ಬೈಲಹೊಂಗಲದಲ್ಲಿ ಮುಸ್ಲಿಮರು ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಆರೋಗ್ಯ ಕಾಪಾಡುವಂತೆ ಪಾರ್ಥಿಸಿದರು.

Leave a Reply

Your email address will not be published. Required fields are marked *

error: Content is protected !!