ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ-ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಕರ್ನಾಟಕ ಬಿಕ್ಕಟ್ಟು

ನವದೆಹಲಿ: ‘ಕರ್ನಾಟಕದ ರಾಜಕೀಯ ಬೆಳವಣಿಗೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಶಾಸಕರಿಗೆ ರಾಜೀನಾಮೆ ನೀಡುವಂತೆ ನಾವು ಒತ್ತಡ ಹೇರಿಲ್ಲ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯಿಂದಲೇ ರಾಜೀನಾಮೆ ಪರ್ವ ಆರಂಭವಾಯಿತು. ಹಿಂಬಾಲಕರು ಅವರ ಮೇಲ್ಪಂಕ್ತಿಯನ್ನು ಅನುಸರಿಸುತ್ತಿದ್ದಾರೆ ಅಷ್ಟೇ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಹೇಳಿದರು.

ಲೋಕಸಭೆಯಲ್ಲಿ ಸೋಮವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಕರ್ನಾಟಕದ ವಿಚಾರ ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿಯನ್ನು ದೂಷಿಸಿದರು. ‘ಕರ್ನಾಟಕದ ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಹರಿಹಾಯ್ದವು. ಸರ್ಕಾರದ ಪರವಾಗಿ ರಾಜನಾಥ್ ಸಿಂಗ್ ಹೇಳಿಕೆ ನೀಡಿದರು.

‘ಪ್ರಜಾತಂತ್ರ ಉಳಿಸಿ’ ಎಂದು ಬರೆದಿದ್ದ ಹಾಳೆಗಳನ್ನು ಸದನದಲ್ಲಿ ತೂರಿಬಿಟ್ಟ ಕಾಂಗ್ರೆಸ್ ಸದಸ್ಯರು ಬಿಜೆಪಿ ನಿಲುವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಲೋಕಸಭೆಯ ಕಾಂಗ್ರೆಸ್‌ ಸಭಾನಾಯಕ ಅಧೀರ್ ಚೌದರಿ ಮತ್ತು ಮುಖ್ಯ ಸಚೇತಕ ಕೊಡಿಕುನಿಲ್ ಸುರೇಶ್‌ ನಿಲುವಳಿ ಮಂಡಿಸಲು ಅವಕಾಶ ಕೋರಿ ಸ್ಪೀಕರ್‌ಗೆ ಸೂಚನಾಪತ್ರ ನೀಡಿದರು.

ಚೌಧರಿ ಅಥವಾ ಸುರೇಶ್ ಅವರಿಗೆ ನಿಲುವಳಿ ಮಂಡಿಸಲು ಸ್ಪೀಕರ್ ಅವಕಾಶ ನೀಡಲಿಲ್ಲ. ಆದರೆ ಶೂನ್ಯವೇಳೆಯಲ್ಲಿ ಮಾತನಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಸ್ಪೀಕರ್ ಮಾತಿಗೆ ಬೆಲೆಕೊಟ್ಟು ಕಾಂಗ್ರೆಸ್ ಮತ್ತು ಡಿಎಂಕೆ ಸಂಸದರು ತಮ್ಮ ಸ್ಥಾನಗಳಿಗೆ ಹಿಂದಿರುಗಿದರು. ನಂತರ ಸ್ಪೀಕರ್ ಪ್ರಶ್ನೋತ್ತರ ಕಲಾಪ ಮುಂದುವರಿಸಿದರು.

‘ಒಳಸಂಚು ಮತ್ತು ಸಿಬಿಐ, ಆದಾಯ ತೆರಿಗೆ ಇಲಾಖೆಯಂಥ ಪ್ರಜಾತಂತ್ರಿಕ ಸಂಸ್ಥೆಗಳ ದುರುಪಯೋಗದಿಂದ ಸಂಸದೀಯ ಪ್ರಜಾಪ್ರಭುತ್ವವು ಅಸ್ಥಿರಗೊಳ್ಳುತ್ತಿದೆ. ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸರ್ಕಾರ ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಅಧೀರ್ ರಂಜನ್ ಚೌಧರಿ ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಗೊಂದಲದ ವಾತಾವರಣ ನೆಲೆಗೊಂಡಿರುವಾಗಲೇ ಸ್ಪೀಕರ್ ಓಂ ಬಿರ್ಲಾ ರಾಜನಾಥ್ ಅವರಿಗೆ ಸರ್ಕಾರದ ಪರವಾಗಿ ಮಾತನಾಡಲು ಅವಕಾಶ ನೀಡಿದರು. ‘ಕರ್ನಾಟಕದ ರಾಜಕೀಯ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದೇ ರಾಹುಲ್ ಗಾಂಧಿ ಅವರಿಂದ ಎಂದು ರಾಜನಾಥ್ ಕುಟುಕಿದರು.

‘ನಮ್ಮ ಪಕ್ಷವು ಪಕ್ಷಾಂತರಕ್ಕೆ ಇಂಬು ನೀಡುವುದುದಿಲ್ಲ ಎನ್ನಲು ಇತಿಹಾಸವೇ ಸಾಕ್ಷಿ. ಇದನ್ನು ನಾವು ಆರಂಭಿಸಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ರಾಜೀನಾಮೆ ಪರ್ವ ಆರಂಭಿಸಿದವರು ರಾಹುಲ್ ಗಾಂಧಿ. ಇತರರು ಅದನ್ನು ಅನುಸರಿಸುತ್ತಿದ್ದಾರೆ ಅಷ್ಟೇ’ ಎಂದು ರಾಜನಾಥ್ ವ್ಯಂಗ್ಯವಾಡಿದರು.

ರಾಜನಾಥ್ ಸಿಂಗ್ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಭೋಜನ ವಿರಾಮಕ್ಕೆಂದು ಮುಂದೂಡುವವರೆಗೂ ಇದು ಮುಂದುವರಿಯಿತು.

Leave a Reply

Your email address will not be published. Required fields are marked *

error: Content is protected !!