ಅಗತ್ಯ ಬಿದ್ದರೆ ಎಲ್ಲಾ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತರಿಗೆ ಅವಕಾಶ ಕಲ್ಪಿಸಲಾಗುವುದು

ಬೆಂಗಳೂರು, ಜು.8: ಬಿಜೆಪಿ, ನಿರಂತರವಾಗಿ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸುತ್ತಲೇ ಇದೆ, ಅತೃಪ್ತ ಶಾಸಕರನ್ನು ಮುಂಬೈಗೆ ಕರೆದೊಯ್ದ ವಿಶೇಷ ವಿಮಾನ ಬಿಜೆಪಿಯ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಸೇರಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಸದಸ್ಯರಿಗೆ ಇಂದು ಉಪಹಾರ ಕೂಟ ಆಯೋಜಿಸಲಾಗಿದೆ, ಮುಂದಿನ ಎಲ್ಲಾ ಆಯ್ಕೆಗಳ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ, ಅಗತ್ಯ ಬಿದ್ದರೆ ಎಲ್ಲಾ ಸಚಿವರಿಂದ ರಾಜೀನಾಮೆ ಪಡೆದು ಅತೃಪ್ತ ಶಾಸಕರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ, ಕಾನೂನಾತ್ಮಕ ಹೋರಾಟವನ್ನು ನಡೆಸುವ ಬಗ್ಗೆಯೂ ಚರ್ಚೆ ನಡೆಸುತ್ತೇವೆ, ಇಂದಿನ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಶಾಸಕಾಂಗ ನಾಯಕ‌ ಸಿದ್ದರಾಮಯ್ಯ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ. ವಿಶೇಷ ವಿಮಾನದಲ್ಲಿ ಶಾಸಕರನ್ನು ಕರೆದೊಯ್ದಿದ್ದಾರೆ, ಈ ವಿಮಾನ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಸೇರಿದ್ದು ಎಂದು ಗೊತ್ತಾಗಿದೆ, ಇಂದಿನ ಈ ಎಲ್ಲಾ ಬೆಳವಣಿಗೆಗಳಿಗೆ ಬಿಜೆಪಿಯೇ ಕಾರಣ ಎಂದು ಅವರು ನೇರ ಆರೋಪ ಮಾಡಿದರು.
ಈಗಾಗಲೇ ಬಿಜೆಪಿಯವರು ಆರು ಬಾರಿ ಸರ್ಕಾರ ಉರುಳಿಸುವ ಯತ್ನ ನಡೆಸಿದ್ದಾರೆ, ದೆಹಲಿ ನಾಯಕರಿಂದ ರಾಜ್ಯದ ನಾಯಕರವರೆಗೂ ಈ ಯತ್ನ ನಡೆಯುತ್ತಿದೆ. ಮುಂಬೈನಲ್ಲಿ ಅತೃಪ್ತ ಶಾಸಕರು ವಾಸ್ತವ್ಯ ಹೂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಸುಭದ್ರವಾಗಿರಬೇಕು, ಆದರೆ, ಈಗಿನ ಬೆಳವಣಿಗೆಯಿಂದ ಬೇಸರವಾಗಿದೆ. ನಿನ್ನೆ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇವೆ, ಶಾಸಕರ ಮನವೊಲಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ, ಕಾನೂನು ಹೋರಾಟ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.

ನಾನೂ ಕೆಲವು ಶಾಸಕರ ಜೊತೆ ಮಾತನಾಡಿದ್ದೇನೆ, ಆದರೆ, ಅವರು ಬಹಳ ಮುಂದೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ನಾವು ಏನು ಬೇಕಾದರೂ ತೀರ್ಮಾನ ಮಾಡುತ್ತೇವೆ, ಸ್ಪೀಕರ್ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಜಿ. ಪರಮೇಶ್ವರ್, ರಾಜ್ಯಪಾಲರು ಶಾಸಕರ ಕುದುರೆ ‌ವ್ಯಾಪಾರಕ್ಕೆ‌ ಕುಮ್ಮಕ್ಕು ನೀಡುತ್ತಿದ್ದಾರೆ, ರಾಜೀನಾಮೆ ಕೊಡಲು ಹೋದ ಶಾಸಕರ ಜೊತೆ ಚರ್ಚೆ ನಡೆಸುವ ಅಗತ್ಯವೇನು ?, ಅದೂ ಎರಡು ಗಂಟೆ ಕಾಲ ಶಾಸಕರ ಜೊತೆ ಚರ್ಚೆ ನಡೆಸುತ್ತಾರೆ, ಪೊಲೀಸ್ ಆಯುಕ್ತರ ಜತೆ ಶಾಸಕರ ಜತೆ ಕೂರಿಸಿ ಮಾತನಾಡಿದ್ದಾರೆ, ಇವೆಲ್ಲ ಗಮನಿಸಿದರೆ ರಾಜ್ಯಪಾಲರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ ಅನ್ನಿಸುತ್ತದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!