janadhvani

Kannada Online News Paper

ಸ್ವದೇಶೀ ನಿವಾಸ ವಲಯದಲ್ಲಿ ವಾಸವಿರುವ ವಿದೇಶೀ ಬ್ಯಾಚುಲರ್ ಗಳ ವಿರುದ್ಧ ಕ್ರಮ

ಕುವೈಟ್ ಸಿಟಿ: ಸ್ವದೇಶೀ ನಿವಾಸ ವಲಯದಲ್ಲಿ ಕುಟುಂಬ ರಹಿತವಾಗಿ ವಾಸವಿರುವ ವಿದೇಶೀಯರನ್ನು ಪತ್ತೆ ಹಚ್ಚಲು ಮುನಿಸಿಪಾಲಿಟಿ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಪ್ರಥಮ ಹಂತವಾಗಿ ಮಾದರಿ ನಿವಾಸ ಕೇಂದ್ರಗಳಲ್ಲಿ ಈ ಬಗ್ಗೆ ಜಾಗೃತಿ ಫಲಕಗಳನ್ನು ಸ್ಥಾಪಿಸಲಾಗಿದೆ. ವಿದೇಶೀ ಬ್ಯಾಚುಲರ್ ಗಳಿಗೆ ನಿವಾಸ ನೀಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತರು ಎಚ್ಚರಿಕೆ ನೀಡಿದ್ದಾರೆ.

ಜುಲೈ ಒಂದರಿಂದ ಪ್ರಾರಂಭಗೊಂಡ ಕಾರ್ಯಾಚರಣೆ ಭಾಗವಾಗಿ ಜಾಗೃತಿ ಫಲಕಗಳನ್ನು ಸ್ಥಾಪಿಸಲಾಗಿದೆ. ವಿವಿಧ ಕಡೆಗಳಲ್ಲಿ 124 ಫಲಕಗಳನ್ನು ಸ್ಥಾಪಿಸಲಾಗಿದ್ದು, ತಪಾಸಣೆಗಾಗಿ ವಿಶೇಷ ತಂಡವನ್ನೂ ನಿಯುಕ್ತಿಗೊಳಿಸಲಾಗಿದೆ. ಈ ಬಗ್ಗೆ ಮುನ್ನೆಚರಿಕೆಗಳನ್ನು ಪೂರ್ತಿಗೊಳಿಸಲಾಗಿದೆ ಎಂದು ಮುನಿಸಿಪಾಲಿಟಿ ಸಾರ್ವಜನಿಕ ಸಂಪರ್ಕ ವಿಭಾಗದ ಅಧಿಕಾರಿ ಮುಹಮ್ಮದ್ ಅಲ್ ಮುಶೈರಿ ಹೇಳಿದ್ದಾರೆ.

ಜುಲೈ, ಅಗಸ್ಟ್ ತಿಂಗಳುಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗುವುದು . ಕಾನೂನು ಉಲ್ಲಂಘನೆ ಮಾಡುವವರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಲಾಗುವುದು ಎಂದು ಅವರು ನುಡಿದರು.

ಮುನಿಸಿಪಾಲಿಟಿಯು ಈ ವಿಷಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ತಿಳಿಸುವ ಸಲುವಾಗಿ ಪ್ರಥಮ ಹಂತದಲ್ಲಿ ಜಾಗೃತಿ ಫಲಕಗಳನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಖಾಲಿ ಮಾಡಿಸುವ ಪ್ರಕ್ರಿಯೆ ಜಾರಿಯಾಗಲಿದೆ. ಗವರ್ನರೇಟ್ ಮತ್ತು ಎಲ್ಲಾ ಮುನಿಸಿಪಾಲಿಟಿಗಳಲ್ಲೂ ಈ ಫಲಕಗಳನ್ನು ಸ್ಥಾಪಿಸಲಾಗಿದ್ದು, ಫಲಕಗಳಲ್ಲಿ ಬ್ಯಾಚುಲರ್ ಗಳು ನಿವಾಸ ಬಿಡುವಂತೆ ಮತ್ತು ನಿವಾಸಿಗಳಿಗೆ ಈ ಸಂಬಂಧಿತ ವಿವರಗಳು ಮತ್ತು ದೂರುಗಳನ್ನು ನೀಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಕಾನೂನು ಉಲ್ಲಂಘಕರು ಇದ್ದಲ್ಲಿ 139 ಸಂಖ್ಯೆಯ ಹಾಟ್ ಲೈನ್‌ಗೆ ಅಥವಾ ಮುನಿಸಿಪಾಲಿಟಿಯ ವೆಬ್ ಸೈಟ್ ಮೂಲಕ ಅಥವಾ ಮುಖತ ಭೇಟಿಯಾಗಿ ತಿಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com