janadhvani

Kannada Online News Paper

ಅಸದುದ್ದೀನ್ ಉವೈಸಿ ಪ್ರಮಾಣ ವಚನ ವೇಳೆ ಜೈ ಶ್ರೀರಾಮ್ ಕೂಗಿದ ಎನ್ಡಿಎ ಸಂಸದರು

ನವದೆಹಲಿ.ಜೂ,18: 17ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ಎನ್ಡಿಎ ಸಂಸದರ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆಗಳ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಲು ಅಸದುದ್ದೀನ್ ಉವೈಸಿ ಅವರ ಹೆಸರು ಕರೆಯುತ್ತಿದ್ದಂತೆಯೇ ವಿರೋಧ ಪಕ್ಷಗಳ ಸಂಸದರ ಜೈಶ್ರಿರಾಮ್, ವಂದೇ ಮಾತರಂ ಘೋಷಣೆಗಳು ಉವೈಸಿ ಪತ್ರಗಳಿಗೆ ಸಹಿ ಹಾಕುವವರೆಗೂ ಮುಂದುವರೆದವು.

ಇಷ್ಟಾದರೂ ವಿಚಲಿತಗೊಳ್ಳದ ಉವೈಸಿ, ಮತ್ತಷ್ಟು ಜೋರಾಗಿ ಘೋಷಣೆಗಳನ್ನು ಕೂಗುವಂತೆ ಸಂಸದರಿಗೆ ಸನ್ನೆ ಮಾಡಿ ಹೇಳಿದ್ದು ವಿಶೇಷವಾಗಿತ್ತು. ಉರ್ದು ಭಾಷೆಯಲ್ಲಿ ಪ್ರಮಾಣವಚನ ಸ್ವಿಕಾರ ಮಾಡಿದ ಉವೈಸಿ, ಕೊನೆಯಲ್ಲಿ ಜೈ ಭೀಮ್, ಅಲ್ಲಾಹು-ಅಕ್ಬರ್ ಮತ್ತು ಜೈ ಭಾರತ ಎಂದು ಹೇಳಿದರು.

ಉವೈಸಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ.ಭಗವಂತ ರಾವ್ ವಿರುದ್ಧ 2,82,186 ಮತಗಳ ಅಂತರದಿಂದ ಗೆದ್ದು ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ಸದನದಲ್ಲಿ ನಡೆಯುವ ಇಂತಹ ಘಟನೆಗಳು ತಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನನ್ನನ್ನು ನೋಡಿದ ಕೂಡಲೇ ಅವರಿಗೆ ಇಂತಹ ವಿಷಯಗಳು ನೆನಪಿಗೆ ಬರುವುದು ಒಳ್ಳೆಯದು. ಹಾಗೆಯೇ ಬಿಹಾರದ ಮುಜಾಫರಪುರದಲ್ಲಿ ಮಕ್ಕಳು ಸಾವನ್ನಪ್ಪುತ್ತಿರುವುದೂ ಅವರಿಗೆ ನೆನಪಿದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ಬಿಹಾರದಲ್ಲಿ ಕಳೆದ ಒಂದು ತಿಂಗಳಲ್ಲಿ ಮೆದುಳು ಜ್ವರದಿಂದ ಸುಮಾರು 120ಮಕ್ಕಳು ಸಾವನ್ನಪ್ಪಿದ್ದಾರೆ.

ಟ್ವಿಟರ್ ನಲ್ಲಿ ಟೀಕೆ:

ಉವೈಸಿಯವರ ಪ್ರಮಾಣ ವಚನ ವೇಳೆ ಘೋಷಣೆ ಕೂಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟರ್ ಬಳಕೆದಾರರು ಸಂಸದರ ನಡೆ ನಾಚಿಕೆಗೇಡಿನದ್ದು ಎಂದು ಘೋಷಣೆ ಕೂಗಿದವರನ್ನು ಟೀಕಿಸಿದ್ದಾರೆ.

ಜಾತ್ಯತೀತ ಗಣರಾಜ್ಯ ವ್ಯವಸ್ಥೆಯ ಸಂಸತ್ತಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಂಸದರನ್ನು ಘೋಷಣೆಗಳಿಂದ ಹಿಂಸಿಸುತ್ತಿದ್ದಾರೆ. ಇನ್ನು ಸಾಮಾನ್ಯ ಮುಸ್ಲಿಮರೊಂದಿಗೆ ಹೇಗೆ ನಡೆದುಕೊಳ್ಳಬಹುದು ಎಂದು ಟ್ವೀಟರ್ನಲ್ಲಿ ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com