janadhvani

Kannada Online News Paper

ಯೋಗಿ ವಿರುದ್ಧ ಪೋಸ್ಟ್‌: ಪತ್ರಕರ್ತನ ಶೀಘ್ರ ಬಿಡುಗಡೆಗೆ ಸುಪ್ರೀಂ ಆದೇಶ

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದ ಪತ್ರಕರ್ತನನ್ನು ಬಂಧಿಸಿರುವುದಕ್ಕೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ಕೂಡಲೇ ಪ್ರಶಾಂತ್ ಕನೋಜಿ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪ್ರಶಾಂತ್ ಕನೋಜಿ ಪತ್ನಿ ಪೊಲೀಸರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಶಾಂತ್ ಬಂಧನ ಸರಿಯಲ್ಲ, ಅವರೇನು ಕೊಲೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌ ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಉತ್ತರ ಪ್ರದೇಶ ಪೊಲೀಸರು ಶನಿವಾರ ದೆಹಲಿಯಲ್ಲಿ ಪ್ರಶಾಂತ್‌ನನ್ನು ಬಂಧಿಸಿ ಲಖನೌಗೆ ಕರೆತಂದಿದ್ದರು. ಅಂದು ಸಂಜೆ ಲಖನೌ ಜೈಲಿಗೆ ಕಳುಹಿಸಿದ್ದಾರೆ. ಹಜರತ್‌ಗಂಜ್‌ ಪೊಲಿಸ್‌ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಾಗಿದೆ.

ದಾಖಲೆಗಳ ಪರಿಶೀಲನೆ ಮತ್ತು ಆ ವ್ಯಕ್ತಿಯ ಸಮಗ್ರ ವಿಚಾರಣೆ ಬಳಿಕ ಆತ ಅಪರಾಧ ಎಸಗಿರುಗುವುದು ತಿಳಿದು ಬಂದಿದ್ದರಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನ ವಿರುದ್ಧ ಐಪಿಸಿ 500(ಮಾನನಷ್ಟ), ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಆದಿತ್ಯನಾಥ್‌ ಅವರ ಕುರಿತಾಗಿ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊವನ್ನು ಆಕ್ಷೇಪಾರ್ಹ ಟೀಕೆಗಳೊಂದಿಗೆ ಟ್ವೀಟ್‌ ಮಾಡಿದ್ದರು ಎಂದು ಎಎನ್‌ಐ ವರದಿಮಾಡಿದೆ.ಪ್ರಶಾಂತ್‌ ಕನೋಜಿ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥ ಎಂದು ತಿಳಿದು ಬಂದಿದೆ.

error: Content is protected !! Not allowed copy content from janadhvani.com