janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಕೇಂದ್ರ ಸರ್ಕಾರವು ಬುಧವಾರ ರಚಸಿರುವ ಪ್ರಮುಖ ಎಂಟು ಸಚಿವ ಸಂಪುಟ ಸಮಿತಿಗಳಲ್ಲಿಯೂ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಲಾ ಆರು ಸಮಿತಿಗಳಲ್ಲಿದ್ದಾರೆ.

ಹೂಡಿಕೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಉದ್ಯೋಗ, ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆಯೂ ಸಮಿತಿಗಳನ್ನು ರಚಿಸಲಾಗಿದೆ. ಈ ಎರಡು ವಿಷಯಗಳ ಮೇಲೆ ಸಂಪುಟ ಸಮಿತಿಗಳನ್ನು ರಚಿಸಿರುವುದು ಇದೇ ಮೊದಲು.

ರಕ್ಷಣೆಗೆ ಸಂಬಂಧಿಸಿದ ಸಮಿತಿಗೆ ಪ್ರಧಾನಿ ಮೋದಿ ಮುಖ್ಯಸ್ಥರಾಗಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಮಿತಿಯಲ್ಲಿದ್ದಾರೆ. ಅಂತರರಾಷ್ಟ್ರೀಯ ವ್ಯವಹಾರ ಹಾಗೂ ರಾಷ್ಟ್ರೀಯ ಭದ್ರತೆಯ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಈ ಸಮಿತಿಯನ್ನು ರಚಿಸಲಾಗಿದೆ.

ಸಂಪುಟದ ನೇಮಕಾತಿ ಸಮಿತಿಗೂ ಪ್ರಧಾನಿ ಮೋದಿ ಅವರೇ ಮುಖ್ಯಸ್ಥರಾಗಿದ್ದು, ಶಾ ಸೇರಿದಂತೆ ಇನ್ನಿತರ ಸದಸ್ಯರು ಇದ್ದಾರೆ.

ಶಾ, ವಸತಿ ಸಂಪುಟ ಸಮಿತಿಯ ಮುಖ್ಯಸ್ಥರಾಗಿದ್ದು, ಇದರಲ್ಲಿ ಸಾರಿಗೆ ಸಚಿವ ನಿತಿನ್‌ ಗಡ‌್ಕರಿ, ಸೀತಾರಾಮನ್‌, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸ್ಥಾನ ಪಡೆದಿದ್ದಾರೆ. ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆಯ ರಾಜ್ಯ ಖಾತೆ ಸಚಿವ ಜೀತೇಂದ್ರ ಸಿಂಗ್‌ ಹಾಗೂ ವಸತಿ ಮತ್ತು ನಗರ ವ್ಯವಹಾರ, ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್‌ ಪುರಿ ಈ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.

ಆರ್ಥಿಕ ವ್ಯವಾಹಾರ ಸಮಿತಿಯಲ್ಲಿ ಮೋದಿ, ಶಾ, ರಾಜನಾಥ್‌ ಸಿಂಗ್‌, ಗಡ್ಕರಿ, ಸೀತಾರಾಮನ್, ಕೃಷಿ ಸಚಿವ ನರಂದ್ರ ಸಿಂಗ್ ತೋಮರ್, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಸದಾನಂದ ಗೌಡ, ಕಾನೂನು ಸಚಿವ ರವಿಶಂಕರ್‌ ಪ್ರಸಾದ್, ಆಹಾರ ಸಂಸ್ಕರಣೆ ಇಲಾಖೆ ಸಚಿವ ಹರ್‌ಸಿಮ್ರತ್ ಕೌರ್ ಬಾದಲ್ ಇದ್ದಾರೆ.

ಸಂಸದೀಯ ವ್ಯವಹಾರಕ್ಕೆ ಸಂಬಂಧಿಸಿದ ಸಮಿತಿಗೆ ಶಾ ಮುಖ್ಯಸ್ಥರಾಗಿದ್ದು, ಸೀತರಾಮನ್‌, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್‌ವಿಲಾಸ್ ಪಾಸ್ವಾನ್, ತೋಮರ್‌, ರವಿಶಂಕರ್‌ ಪ್ರಸಾದ್‌, ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಚಾಂದ್ ಗೆಹ್ಲೋಟ್, ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಸ್ಥಾನ ಪಡೆದಿದ್ದಾರೆ. ಸಂಸದೀಯ ವ್ಯವಹಾರ ಖಾತೆ ರಾಜ್ಯ ಸಚಿವ ಅರ್ಜುನ್‌ ರಾಜ್‌ ಮೇಘ್ವಾಲ್‌ ಮತ್ತು ವಿ. ಮುರುಳೀಧರನ್‌ ಅವರು ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.

ರಾಜಕೀಯ ವ್ಯಹಾರ ಸಮಿತಿಯಲ್ಲಿ ಮೋದಿ, ಶಾ, ಗಡ್ಕರಿ, ಸೀತಾರಾಮನ್‌, ಗೋಯಲ್‌, ಪಾಸ್ವಾನ್, ತೋಮರ್‌, ಪ್ರಸಾದ್‌, ಹರ್‌ಸಿಮ್ರತ್ ಕೌರ್, ಆರೋಗ್ಯ ಸಚಿವ ಹರ್ಷವರ್ಧನ್‌, ಕೈಗಾರಿಕೆ ಸಚಿವ ಅರವಿಂದ ಸಾವಂತ್‌ ಹಾಗೂ ಜೋಷಿ ಇದ್ದಾರೆ. ಹೊಸ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಸಚಿವ ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ.

error: Content is protected !! Not allowed copy content from janadhvani.com