ನವದೆಹಲಿ(ಜೂನ್.05): ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾಗವಹಿಸಿ, ಪರಸ್ಪರ ಈದ್ ಶುಭಾಶಯ ಕೋರಿದರು.
ಪ್ರಾರ್ಥನೆ ಬಳಿಕ ಸಮುದಾಯವನ್ನುದ್ದೇಶಿಸಿ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿಯವರು, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಪ್ರತಿದಿನ ಸೂರ್ಯ ಬೆಳಗ್ಗೆ ಉದಯಿಸುತ್ತಾನೆ. ನಂತರ ಬಿಸಿಲಿನ ಪ್ರಖರತೆ ತೀವ್ರವಾಗುತ್ತಾ ಸಾಗುತ್ತದೆ. ಸಂಜೆಯ ಹೊತ್ತಿಗೆ ಸೂರ್ಯ ಮುಳುಗಿ ಹೋಗುತ್ತಾನೆ. ಸದ್ಯ ಬಿಜೆಪಿ ಪರಿಸ್ಥಿತಿಯೂ ಇದೇ ಎಂದು ಟೀಕಿಸಿದ್ದಾರೆ.
ಹಿಂದೂ ಅಂದರೆ ತ್ಯಾಗ, ಮುಸಲ್ಮಾನ್ ಎಂದಲ್ಲಿ ನಂಬಿಕೆ, ಕ್ರಿಶ್ಚಿಯನ್ ಅಂದರೆ ಪ್ರೀತಿ, ತ್ಯಾಗಕ್ಕೆ ಮತ್ತೊಂದು ಹೆಸರು ಸಿಖ್. ಇದುವೇ ನಮ್ಮ ಭಾರತ ದೇಶ. ಈ ದೇಶವನ್ನು ನಾವು ಕಾಪಾಡುತ್ತೇವೆ. ಹೊಡೆದಾಳುವ ನೀತಿ ಅನುಸರಿಸಿದರೆ ಹೋರಾಟ ಮಾಡುತ್ತೇವೆ. ಇದು ನಮ್ಮ ಘೋಷವಾಕ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ನಿಮ್ಮೊಂದಿಗೆ ನಾವಿದ್ದೇವೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೆದರಬೇಡಿ. ಅವರು ಜೈ ಶ್ರೀರಾಮ್ ಎನ್ನುತ್ತಲೇ ರಾಜಕೀಯ ಮಾಡಲಿ. ಸದ್ಯದಲ್ಲೇ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಕುಟುಕಿದ್ದಾರೆ.
ಇವಿಎಂ ಮತಯಂತ್ರ ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ಧಾರೆ. ಎಷ್ಟು ಬೇಗ ಉದಯಿಸಿದರೋ ಅಷ್ಟೇ ವೇಗದಲ್ಲಿ ಮುಳುಗಿ ಹೋಗುತ್ತಾರೆ. ನಮ್ಮ ದೇಶ ಸರ್ವಧರ್ಮಗಳ ಶಾಂತಿಯ ತೋಟ. ಇಲ್ಲಿ ಕೋಮು ಗಲಭೆಗೆ ಅವಕಾಶವಿಲ್ಲ. ನಾವು ಕೇಂದ್ರದ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ಕಚೇರಿ ಮೇಲೆ ಜೈ ಶ್ರೀರಾಮ್ ಅಳಿಸಿ ತೃಣಮೂಲ ಕಾಂಗ್ರೆಸ್ ಚಿಹ್ನೆ ಪೈಂಟ್ ಮಾಡಿದ್ದ ಮಮತಾ ಬ್ಯಾನರ್ಜಿ ನಡೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.