ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿದ್ದರು ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ದಂಪತಿ ಹಾಗೂ ಇಬ್ಬರು ಪುರುಷರನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದೆ.
ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಗುಂಪಿನಲ್ಲಿ ಇದ್ದವರು, ಚಪ್ಪಲಿಯಿಂದ ಮಹಿಳೆಯ ತಲೆಗೆ ಪದೆಪದೇ ಹೊಡೆದಿದ್ದಾರೆ. ಮುಖಕ್ಕೆ ಸಣ್ಣ ಬಟ್ಟೆ ಕಟ್ಟಿಕೊಂಡಿದ್ದ ಹಲ್ಲೆಕೋರರು, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಅವರನ್ನು ಥಳಿಸಿದ್ದಾರೆ. ಇತರೆ ಮೂವರು ಪುರುಷರನ್ನು ಮರಕ್ಕೆ ಕಟ್ಟಿ ಹಾಕಿ, ಒಬ್ಬೊಬ್ಬರಾಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ.
ಘಟನೆ ಸಂಬಂಧ ರಾಜಧಾನಿ ಭೋಪಾಲ್ನಿಂದ 350 ಕಿ.ಮೀ. ದೂರದಲ್ಲಿರುವ ಸಿಯೊನಿ ನಗರದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಡಿಯೋ ನಾಲ್ಕು ದಿನಗಳ ಹಿಂದಿನದ್ದು. ಮತ್ತು ನಾಲ್ಕು ಜನರನ್ನು ಬಂಧಿಸಿ, ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜೈಲಿಗೆ ಕಳುಹಿಸಲಾಗಿದೆ. ಮತ್ತೊಬ್ಬನನ್ನು ಬಂಧಿಸಲಾಗಿದ್ದು, ಅವನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಲಲಿತ್ ಶಕ್ಯಾವರ್ ತಿಳಿಸಿದ್ದಾರೆ.
ಶುಭಂ ಸಿಂಗ್ ಎಂಬ ಆರೋಪಿ ರಾಮ ಸೇನಾ ಸದಸ್ಯರನ್ನು ಕರೆ ಮಾಡಿ ಕರೆಸಿಕೊಂಡಿದ್ದಾನೆ. ಹಲ್ಲೆ ಮಾಡಿದ ವಿಡಿಯೋವನ್ನು ಮೆ 23ರಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾನೆ. ಆನಂತರ ಡಿಲಿಟ್ ಮಾಡಲಾಗಿದೆ. ಮಲೆಂಗಾವ್ ಸ್ಪೋಟದ ಆರೋಪಿ, ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಪ್ರಗ್ಯಾ ಠಾಕೂರ್ ಜೊತೆಗೆ ನಿಂತಿರುವ ಫೋಟೋವನ್ನು ಶುಭಂ ಸಿಂಗ್ ಏಪ್ರಿಲ್ನಲ್ಲಿ ಅಪ್ಲೋಡ್ ಮಾಡಿದ್ದ.
ಮೇ 22ರಂದು ಮಹಿಳೆ ಸೇರಿದಂದ ಮೂವರು ಪುರುಷರು ಆಟೋರಿಕ್ಷಾದಲ್ಲಿ ಹೋಗುತ್ತಿದ್ದರು. ಈ ವೇಳೆ ರಿಕ್ಷಾ ತಡೆದ ಗುಂಪು, ದನದ ಮಾಂಸ ಸಾಗಿಸುತ್ತಿದ್ದಿರಾ ಎಂದು ಆರೋಪಿಸಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಕೋರರು ಜೈ ಶ್ರೀರಾಮ್ ಎಂದು ಕೂಗುತ್ತಿರುವುದು ವೈರಲ್ ಆದ ವಿಡಿಯೋದಲ್ಲಿ ಕೇಳಿಸುತ್ತದೆ. ದಯನೀಯವಾಗಿ ಅವರು ಬೇಡಿಕೊಳ್ಳುತ್ತಿರುವ ಕನಿಕರ ಇಲ್ಲದ ಹಾಗೆ ಗುಂಪಿನಲ್ಲಿದ್ದವರು ದೊಣ್ಣೆ, ಟೈರ್ನಿಂದ ಅಮಾನವೀಯವಾಗಿ ಹಲ್ಲೆ ಮಾಡುತ್ತಿರುವುದು ವಿಡಿಯೋದಲ್ಲಿ ಇದೆ.
ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಮುಫ್ತಿ, ಮುಗ್ದ ಮುಸ್ಲಿಂ ಜನರ ಮೇಲೆ ದಾಳಿ ಮಾಡಿರುವುದು ಖಂಡನೀಯ. ಈ ಹಲ್ಲೆಕೋರರ ಮೇಲೆ ಕಮಲನಾಥ್ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.