janadhvani

Kannada Online News Paper

ಶ್ರೀಲಂಕಾ ಕೃತ್ಯದ ರೂವಾರಿ ಝಹ್ರಾನ್ ಹಾಶಿಂ ಕೇರಳಕ್ಕೂ ಬಂದಿದ್ಧ

ಈ ವರದಿಯ ಧ್ವನಿಯನ್ನು ಆಲಿಸಿ


ನವದೆಹಲಿ: ಶ್ರೀಲಂಕಾ ಕೃತ್ಯದ ರೂವಾರಿ ಝಹ್ರಾನ್ ಹಾಶಿಂ ಕೇರಳಕ್ಕೂ ಬಂದಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಸರಗೋಡು ಮತ್ತು ಪಾಲಕ್ಕಾಡ್‌ನಲ್ಲಿ ಇಂದು ಶೋಧ ನಡೆಸಿದೆ. ಮೂವರು ಶಂಕಿತರ ವಿಚಾರಣೆ ನಡೆಸಿದ್ದು,ಓರ್ವನನ್ನು ವಶಕ್ಕೆ ಪಡೆದಿದೆ.

ಪಾಲಕ್ಕಾಡ್ ಜಿಲ್ಲೆ ಕೈಲಂಗಾಡ್ ನ ನಿವಾಸಿ ರಿಯಾಜ್ ಅಬೂಬಕರ್ (28) ನನ್ನು ಎನ್ಐಎ ವಶಕ್ಕೆ ಪಡೆದಿದೆ.ಹೆಚ್ಚಿನ ವಿಚಾರಣೆಗಾಗಿ ಆತನನ್ನು ಎರ್ನಾಕುಳಂ ಗೆ ಕರೆದೊಯ್ಯಲಾಗಿದೆ.

ಕಾಸರಗೋಡಿನ ಎರಡು ಮನೆಗಳಲ್ಲಿ ಮತ್ತು ಪಾಲಕ್ಕಾಡ್‌ನ ಒಂದು ಪ್ರದೇಶದಲ್ಲಿ ತಪಾಸಣೆ ನಡೆಸಿದೆ. ಮೂವರು ಶಂಕಿತರ ವಿಚಾರಣೆ ನಡೆಸಲಾಗಿದೆ. 2016ರಲ್ಲಿ ಐಸಿಸ್ ಸೇರಲು ಕೇರಳ ತೊರೆದಿರುವ ಗುಂಪಿನೊಂದಿಗೆ ಇವರು ಸಂಪರ್ಕದಲ್ಲಿರುವ ಶಂಕೆ ಇದೆ.

ಕಾಸರಗೋಡಿನ ಅಬೂಬಕ್ಕರ್‌ ಸಿದ್ಧಿಖಿ ಮತ್ತು ಅಹ್ಮದ್ ಅರಾಫತ್ ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ನಾಳೆ ಕೊಚ್ಚಿಯ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಎನ್ಐಎ ಆದೇಶಿಸಿದೆ. ಸಿದ್ಧಿಖಿ ಮತ್ತು ಅರಾಫತ್ ಅವರಿಂದ ಮೊಬೈಲ್ ಮತ್ತು ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ.

ಶ್ರೀಲಂಕಾ ಸ್ಫೋಟದ ರೂವಾರಿ, ನ್ಯಾಷನಲ್ ತೌಹೀದ್ ಜಮಾಅತ್ ಸಂಘಟನೆಯ ಮುಖಂಡ ಝಹ್ರಾನ್ ಪದೇ ಪದೇ ತಮಿಳುನಾಡು ಮತ್ತು ಕೇರಳಕ್ಕೆ ಭೇಟಿ ನೀಡುತ್ತಿರುತ್ತಾನೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದ್ದವು. ಆಲುವಾ, ಪನಾಯಿಕುಳ ಮತ್ತು ಮಲಪ್ಪುರಂನಲ್ಲಿ ಅವನು ಭಾಷಣ ಮಾಡಿದ್ದ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಝಹ್ರಾನ್ ಹಾಶಿಂ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಮೇರೆಗೆ ಕೇರಳದ ಮೂವರು ಶಂಕಿತರ ವಿಚಾರಣೆ ನಡೆಸಲಾಗಿದೆ. ಈ ಯುವಕರು ಝಹ್ರಾನ್ ಚಿಂತನೆಗಳಿಂದ ಆಕರ್ಷಿತರಾಗಿದ್ದರು ಎಂದು ಮೂಲಗಳು ಹೇಳಿವೆ. ಐಸಿಸ್ ಸಂಘಟನೆ ಜತೆಗೂ ಇವರು ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.

ಶಂಕಿತರಿಂದ ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್‌ನ ಬೋಧನೆಗಳ ಡಿವಿಡಿಗಳು, ಮೊಬೈಲ್‌ಗಳು, ಸಿಮ್‌ ಕಾರ್ಡ್‌ಗಳು, ಮೆಮೋರಿ ಚಿಪ್‌ಗಳು, ಪೆನ್‌ಡ್ರೈವ್‌ ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಅರೆಬಿಕ್‌ ಮತ್ತು ಮಲಯಾಳಂ ಭಾಷೆಯಲ್ಲಿದ್ದ ಕೈಬರಹದ ಕೆಲವು ದಾಖಲೆ ಕೂಡ ಎನ್‌ಐಎ ಜಪ್ತಿ ಮಾಡಿದೆ.

error: Content is protected !! Not allowed copy content from janadhvani.com