janadhvani

Kannada Online News Paper

ಶ್ರೀಲಂಕಾ ಸ್ಫೋಟ: ಮಹಾ ಪಾತಕ ಮತ್ತು ಖಂಡನೀಯ -ಇಂಡಿಯನ್ ಗ್ರಾಂಡ್ ಮುಫ್ತಿ

ಕಲ್ಲಿಕೋಟೆ: ಶ್ರೀಲಂಕಾದ ಕ್ರಿಸ್ಟಿಯನ್ ಧರ್ಮೀಯರ ವಿಶೇಷ ದಿನವಾದ ಈಸ್ಟರ್ ನಂದು ಚರ್ಚ್ ಹಾಗೂ ಹೋಟೆಲ್ ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳು ಅತ್ಯಂತ ಹೀನ ಕೃತ್ಯ ಹಾಗೂ ಖಂಡನೀಯ, ಘಟನೆಯಲ್ಲಿ ಬಲಿಯಾದವರ ಕುಟುಂಬಿಕರ ದುಃಖದಲ್ಲಿ ನಾವು ಕೂಡಾ ಭಾಗಿಯಾಗಿದ್ದೇವೆ ಎಂದು ಭಾರತದ ಗ್ರಾಂಡ್ ಮುಫ್ತಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.

ಭಯೋತ್ಪಾದಕರು ವಿಶ್ವದ ಶಾಂತಿಯನ್ನು ನಾಶಪಡಿಸಲು ಬಯಸುತ್ತಾರೆ. ಹಿಂಸೆಯೇ ಅವರ ಗುರಿ. 200 ಕ್ಕಿಂತ ಹೆಚ್ಚು ಜನರನ್ನು ಕೊಂದು ಅವರು ಏನನ್ನು ಸಾಧಿಸಿದರು? ಪ್ರಾರ್ಥನಾ ಸ್ಥಳಗಳು ಮತ್ತು ಹೋಟೆಲ್ ಗಳಲ್ಲಿ ಜನರು ಸಮಾಧಾನವನ್ನು ಬಯಸಿ ಮಾನುಷಿಕ ಸಂತೋಷವನ್ನು ಅನುಭವಿಸಲು ಭೇಟಿ ನೀಡುತ್ತಾರೆ. ಅಂತಹ ಕೇಂದ್ರಗಳಲ್ಲಿ ಭಯೋತ್ಪಾದಕ ದಾಳಿ ನಡೆಸುವವರು ಮಾನವೀಯ ಶಾಂತಿಯನ್ನು ಅಂತ್ಯಗೊಳಿಸಲು ಬಯಸುವವರಾಗಿದ್ದಾರೆ.

ಘಟನೆಯ ಬಳಿಕ ಶ್ರೀಲಂಕಾ ಸರ್ಕಾರ ಕೈಗೊಂಡ ರಚನಾತ್ಮಕ ಚಟುವಟಿಕೆಗಳು ಪ್ರಶಂಸನೀಯ.

ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿ ನಡೆಸುವ ದಾಳಿಯ ಹಿಂದಿನ ರಹಸ್ಯವನ್ನು ಬೇಧಿಸಬೇಕು. ಅಪರಾಧಿಗಳನ್ನು ಪತ್ತೆಹಚ್ಚಲು ಅಗತ್ಯವಿದ್ದಲ್ಲಿ ನೆರೆಯ ರಾಜ್ಯ ಭಾರತ ಸಹಕಾರ ನೀಡಬೇಕು.

ಗಾಯಗೊಂಡಿರುವ 500ಕ್ಕೂ ಮಿಕ್ಕ ಜನರು ಶೀಘ್ರ ಚೇತರಿಸಿಕೊಳ್ಳಲು ವಿಶ್ವಾಸಿಗಳು ಪ್ರಾರ್ಥಿಸಬೇಕು ಎಂದು ಕಾಂತಪುರಂ ಮನವಿ ಮಾಡಿದರು.

error: Content is protected !! Not allowed copy content from janadhvani.com