ದೇಶದ ದಂತ ವೈದ್ಯರು ವೈದ್ಯಕೀಯ ಸೇವೆ ಗೈಯಲು ಅವಕಾಶ?

ಹೊಸದಿಲ್ಲಿ, ಎ. 21:ಸೇತುಬಂಧ ಶಿಕ್ಷಣ ಪಡೆದು ದೇಶದಲ್ಲಿನ ದಂತ ವೈದ್ಯರು ಕೂಡಾ ಮಧ್ಯಮ ಹಂತದ ಆರೋಗ್ಯ ಸೇವೆ ಮತ್ತು ಕುಟುಂಬ ವೈದ್ಯಕೀಯ ಸೇವೆ ಒದಗಿಸಲು ಅವಕಾಶ ನೀಡುವ ಪ್ರಸ್ತಾವನೆ ಬಗ್ಗೆ ನೀತಿ ಆಯೋಗ ಹಾಗೂ ಆರೋಗ್ಯ ಸಚಿವಾಲಯ ಗಂಭೀರ ಪರಿಶೀಲನೆ ನಡೆಸಿದೆ.

ಈ ಸಂಬಂಧ ಚರ್ಚಿಸಲು ಎ.22ರಂದು ನೀತಿ ಆಯೋಗ ವಿಶೇಷ ಸಭೆ ಕರೆದಿದೆ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಮಟ್ಟವನ್ನು ಹೆಚ್ಚಿಸುವ ಸಂಬಂಧ ಚರ್ಚಿಸಲು ಪ್ರಧಾನಿ ಕಚೇರಿಯಲ್ಲಿ ಎ. 9ರಂದು ನಡೆದ ಸಭೆಯ ನಡಾವಳಿಗೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ ಸೋಮವಾರದ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ದಂತವೈದ್ಯರಿಗೆ ಸೇತುಬಂಧ ಶಿಕ್ಷಣ ನೀಡಿ ಕುಟುಂಬ ವೈದ್ಯರಾಗಿ ಮತ್ತು ಮುಖ್ಯವಾಹಿನಿ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಭಾರತದ ದಂತವೈದ್ಯಕೀಯ ಮಂಡಳಿ ಒಂದು ವರ್ಷದ ಹಿಂದೆಯೇ ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಈ ಪ್ರಸ್ತಾವನೆ ಸಲ್ಲಿಸಿತ್ತು. ಇದು ದಂತವೈದ್ಯರಿಗೆ ಪ್ರಯೋಜನವಾಗುವ ಜತೆಗೆ ದೇಶದ ವೈದ್ಯರ ಕೊರತೆಯನ್ನೂ ನೀಗಿಸಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಮೂರು ವರ್ಷಗಳಲ್ಲಿ ದಂತವೈದ್ಯಕೀಯ ಮತ್ತು ವೈದ್ಯಕೀಯ ಕೋರ್ಸ್‌ಗಳ ಪಠ್ಯಕ್ರಮ ಒಂದೇ ಆಗಿರುವುದರಿಂದ ದಂತವೈದ್ಯರಿಗೆ ಸೂಕ್ತ ಸೇತುಬಂಧ ಶಿಕ್ಷಣ ನೀಡಿ ವೈದ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವುದು ಕಾರ್ಯಸಾಧು ಎನ್ನಲಾಗಿದೆ. ಆದರೆ ಭಾರತೀಯ ವೈದ್ಯಕೀಯ ಸಂಘ ಇದನ್ನು ವಿರೋಧಿಸಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!