ಮೋದಿ ಹೆಸರಲ್ಲಿ ಮತ ಯಾಚನೆ ಅಪಾಯ- ಕಲ್ಲಡ್ಕ ಪ್ರಭಾಕರ್‌ ಭಟ್‌

ಮಡಿಕೇರಿ: ‘ಬಿಜೆಪಿ ಅಭ್ಯರ್ಥಿಗಳು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿ ಆಗಲಿದೆ’ ಎಂದು ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಇಲ್ಲಿ ಶನಿವಾರ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಇದು ರಾಷ್ಟ್ರಮಟ್ಟದ ಚುನಾವಣೆಯಾದರೂ ಮೋದಿಯನ್ನೇ ತೋರಿಸಿ ಮತ ಕೇಳುತ್ತಿರುವುದು ಒಳ್ಳೆಯ ಪ್ರಕ್ರಿಯೆ ಅಲ್ಲ. ಆರ್‌ಎಸ್‌ಎಸ್‌ ಸ್ವಯಂ ಸೇವಕರು ಎಂದೂ ವ್ಯಕ್ತಿಪೂಜೆ ಮಾಡುವುದಿಲ್ಲ’ ಎಂದು ಹೇಳಿದರು.

‘ಮೋದಿ ಅವರು ಕಳೆದ 65 ವರ್ಷಗಳಲ್ಲಿ ಆಗದ ಕೆಲಸಗಳನ್ನು ಐದು ವರ್ಷದಲ್ಲಿ ಮಾಡಿದ್ದಾರೆ. ಎಲ್ಲ ಹಂತದಲ್ಲೂ ಸಾಧನೆ ತೋರಿದ್ದಾರೆ. ಹಾಗಾಗಿಯೇ ಮೋದಿಗೆ ವೋಟು ಕೊಡುವಂತೆ ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ನೈಜವಾಗಿ ಅಭ್ಯರ್ಥಿಗಳು ತಮ್ಮ ಸಾಧನೆಯ ಆಧಾರದಲ್ಲಿ ಮತಯಾಚಿಸಬೇಕಿತ್ತು. ಮೋದಿ ಸಾಧನೆ ಎದುರು ಅಭ್ಯರ್ಥಿಗಳು ಗೌಣವಾಗಿದ್ದಾರೆ’ ಎಂದರು.

‘ಮೋದಿ ಅವರು ಕ್ಷೇತ್ರದ ಅಭಿವೃದ್ಧಿಗೆಂದು ಸಂಸದರು ಏನು ಕೇಳಿದರೂ ನೀಡುತ್ತಿದ್ದರು. ಅದನ್ನು ಸಂಸದರು ಬಳಕೆ ಮಾಡಿಕೊಳ್ಳಬೇಕಿತ್ತು. ಕೆಲವರು ಆ ಸಾಧನೆ ಮಾಡಿರಲೂಬಹುದು. ಆದರೆ, ಮೋದಿ ಹೆಸರು ಮಾತ್ರ ಬಳಸಿಕೊಳ್ಳುತ್ತಿರುವುದು ಅಪಾಯಕಾರಿ’ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!