ಹುರೂಬ್ ದುರುಪಯೋಗ: ಸುಳ್ಳು ದೂರು ದಾಖಲಿಸಿದ 2684 ಪ್ರಕರಣಗಳು ರದ್ದು

ರಿಯಾದ್: ಕಾರ್ಮಿಕ ನಾಪತ್ತೆಯಾಗಿರುವುದಾಗಿ ಸುಳ್ಳು ದೂರು ನೀಡಲಾದ 2684 ಪ್ರಕರಣಗಳನ್ನು ರದ್ದುಪಡಿಸಿರುವುದಾಗಿ ಸೌದಿ ಲೇಬರ್ ಆಫೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಕಿ ಸಂಬಳ ಪಾವತಿಸದಿರಲು ಮತ್ತಿತರ ಉದ್ದೇಶದಿಂದ ಹಲವಾರು ಪ್ರಾಯೋಜಕರು ಕಾರ್ಮಿಕರು ನಾಪತ್ತೆಯಾಗಿರುವುದಾಗಿ ಸುಳ್ಳು ದೂರು ನೀಡುತ್ತಿದ್ದು, ದೂರು ಸುಳ್ಳೆಂದು ಕಂಡುಬಂದರೆ ಅಂತಹ ದೂರುದಾರ ಪ್ರಾಯೋಜಕರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ವಿದೇಶೀ ಕಾರ್ಮಿಕರು ಪ್ರಾಯೋಜಕರಿಂದ ಕೆಲಸ ಬಿಟ್ಟು ಓಡಿ ಹೋದ ಪ್ರಕರಣಗಳನ್ನು ಹುರೂಬ್ ವಿಭಾಗದಲ್ಲಿ ದಾಖಲಿಸಲು ಸೌದಿ ಪ್ರಾಯೋಜಕರಿಗೆ ಅವಕಾಶವಿದೆ. ಆದರೆ, ಈ ಅವಕಾಶವನ್ನು ಬಹುತೇಕ ಪ್ರಾಯೋಜಕರು ದುರುಪಯೋಗ ಗೊಳಿಸುತ್ತಿದ್ದಾರೆ ಎಂಬುದು ಮನವರಿಕೆಯಾದ ಹಿನ್ನೆಲೆಯಲ್ಲಿ ಅಂತಹ ನಕಲಿ ಹುರೂಬ್ ದೂರುದಾರರ ವಿರುದ್ದ ದೂರು ಹೆಚ್ಚಾಗತೊಡಗಿದೆ.

ಅಂತಹ ಸುಳ್ಳು ಹುರೂಬ್ ದೂರುದಾರರ ವಿರುದ್ದ ದೂರು ದಾಖಲಿಸಲು ಕಾರ್ಮಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶದ ಅನುಸಾರ ದಾಖಲಾದ 2684 ಪ್ರಕರಣಗಳನ್ನು ರಿಯಾದ್‌ನಲ್ಲಿ ವಜಾಗೊಳಿಸಿರುವುದಾಗಿ ಕಾರ್ಮಿಕ ವಿಭಾಗಾಧಿಕಾರಿ ಕರೀಂ ಅಸೀರಿ ವ್ಯಕ್ತಪಡಿಸಿದ್ದಾರೆ.

ಹುರೂಬ್ ರದ್ದುಪಡಿಸಲಾದ ಪ್ರಕರಣಗಳಲ್ಲಿ ಹಳೆಯ ಪ್ರಾಯೋಜಕರ ಬದಲಾಗಿ ಹೊಸ ಪ್ರಾಯೋಜಕರನ್ನು ಕಂಡುಹಿಡಿದು ವಿಸಾ ಬದಲಾಯಿಸಲು ಕಾರ್ಮಿಕನಿಗೆ ಅವಕಾಶವಿದೆ. ಸುಳ್ಳು ಹುರೂಬ್ ದಾಖಲಿಸಿದ ಪ್ರಾಯೋಜಕನ ಕೆಲಸದ ಪರವಾನಗಿಯನ್ನು ಒಂದು ವರ್ಷದ ವರೆಗೆ ತಡೆಯಲಾಗುವುದು. ಆದರೆ, ಕಾರ್ಮಿಕ ಮತ್ತಿತರ ಸಚಿವಾಲಯದ ಇತರ ಸೇವೆಗಳು ಮುಂದುವರಿಯಲಿದೆ.

ಅನ್ಯಾಯವಾಗಿ ಕಾರ್ಮಿಕರನ್ನು ಹುರೂಬ್ ಮಾಡುವುದನ್ನು ಮುಂದುವರಿಸಿದರೆ ಅಂತಹ ಪ್ರಾಯೋಜಕರ ವಿರುದ್ದ ನೀಡಲಾದ ದೂರಿನ ಅನುಸಾರ ಸೇವೆಗಳನ್ನು ಮೂರರಿಂದ ಐದು ವರ್ಷದ ವರಗೆ ಮೊಟಕುಗೊಳಿಸಲಾಗುವುದು ಎಂದು ಅಬ್ದುಲ್ ಕರೀಂ ಅಸೀರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!