janadhvani

Kannada Online News Paper

ಜನಪ್ರತಿನಿಧಿ ಕಾಯಿದೆಯನ್ನು ಉಲ್ಲಂಘಿಸಿದ ಸ್ಮೃತಿ ಇರಾನಿ ವಿರುದ್ದ ದೂರು

ನವದೆಹಲಿ: ಸ್ಮೃತಿ ಇರಾನಿ ಚುನಾವಣಾ ಆಯೋಗಕ್ಕೆ ಶಿಕ್ಷಣ ಅರ್ಹತೆ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಕಾಂಗ್ರೆಸ್ ಈಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಶುಕ್ರವಾರಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಸ್ಮೃತಿ ಇರಾನಿ ಅವರ ಉದ್ದೇಶಪೂರ್ವಕ ತಪ್ಪುಗಳ ವಿರುದ್ಧ ತುರ್ತು ಹಸ್ತಕ್ಷೇಪ ಕೋರಿ ಆಗ್ರಹಿಸಲಾಗಿದೆ.ಅಲ್ಲದೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಗುರುವಾರದಂದು ಸ್ಮೃತಿ ಇರಾನಿ ಅವರು ಅಮೇಥಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿದ ನಂತರ ದೆಹಲಿ ವಿಶ್ವವಿದ್ಯಾನಿಲಯದ ಓಪನ್ ಕಲಿಕೆ ಶಾಲೆಯಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿಗೆ ಸೇರಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.ಆದರೆ ಪದವಿಯನ್ನು ಪೂರ್ಣಗೊಳಿಸಿಲ್ಲವೆಂದು ಘೋಷಿಸಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಸ್ಮೃತಿ ಇರಾನಿಯವರ ಈ ಹಿಂದಿನ ಅಫಿದಾವಿತ್ತನಲ್ಲಿ 2004, 2011, 2014 ಮತ್ತು 2017 ರ ಲೋಕಸಭೆ ಮತ್ತು ರಾಜ್ಯಸಭಾ ಚುನಾವಣೆಗಳಿಗೆ ಸಲ್ಲಿಸಿದ ಮಾಹಿತಿಗಳು ಭಿನ್ನವಾಗಿವೆ.ಆದ್ದರಿಂದ ಅವರು ಸುಳ್ಳು ದಾಖಲೆಗಳನ್ನು ನೀಡಿ 1950 ರ ಜನಪ್ರತಿನಿಧಿ ಕಾಯಿದೆಯ ವಿಭಾಗ 33 ನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಅದು ಉಲ್ಲೇಖಿಸಿದೆ.

error: Content is protected !! Not allowed copy content from janadhvani.com