ಮುಸ್ಲಿಂಲೀಗ್ ವೈರಸ್ ಅಲ್ಲ ಆ್ಯಂಟಿ ವೈರಸ್: ಕುಞಾಲಿ ಕುಟ್ಟಿ

ಮಲಪ್ಪುರಂ:ಮುಸ್ಲಿಂ ಲೀಗ್ ಎಂಬುದು ವೈರಸ್, ಈ ವೈರಸ್ ದಾಳಿಗೆ ತುತ್ತಾದರೆ ಯಾರೊಬ್ಬರೂ ಪಾರಾಗುವುದಿಲ್ಲ ಎಂದ ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುಞಾಲಿಕುಟ್ಟಿ, ಮುಸ್ಲಿಂ ಲೀಗ್ ವೈರಸ್ ಅಲ್ಲ ಆ್ಯಂಟಿ ವೈರಸ್ ಎಂದು ಹೇಳಿದ್ದಾರೆ.

ಹಲವಾರು ಸಂದರ್ಭಗಳ್ಲಿ ಸಿಪಿಎಂ ಕೂಡಾ ಮುಸ್ಲಿಂ ಲೀಗ್‍ನ ಮಧ್ಯಪ್ರವೇಶವನ್ನು ಬಯಸಿತ್ತು. ಕೋಮು ಸಂಘರ್ಷವುಂಟಾದಾಗ ಅದನ್ನು ನಿಯಂತ್ರಿಸಿದ್ದಕ್ಕೆ ಸಿಪಿಎಂ ನಮ್ಮನ್ನು ಶ್ಲಾಘಿಸಿದ್ದೂ ಇದೆ. ಚುನಾವಣಾ ಆಯೋಗ ಅಂಗೀಕರಿಸಿದ ಪಕ್ಷ ನಮ್ಮದು. ಹೀಗಿರುವಾಗ ಯೋಗಿ ಆದಿತ್ಯನಾಥ ಈ ರೀತಿ ಹೇಳಿದ್ದು ಸರಿಯಲ್ಲ. ಎಂದೆಂದಿಗೂ ನಾವು ಕೋಮುವಾದಿ ಪಕ್ಷಗಳ ವಿರುದ್ಧವೇ ನಿಲುವು ಹೊಂದಿದ್ದೇವೆ. ವೈರಸ್ ಯಾರು ಎಂಬುದನ್ನು ನಾನು ಹೇಳುವುದಿಲ್ಲ ಎಂದು ಕುಞಾಲಿ ಕುಟ್ಟಿ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಭಾರತದಲ್ಲಿರುವ ವೈರಸ್ ಬಿಜೆಪಿ: ಚೆನ್ನಿತ್ತಲ
ಕೊಚ್ಚಿ: ಚುನಾವಣಾ ಆಯೋಗ ಅಂಗೀಕರಿಸಿದ ಪಕ್ಷನ್ನು ವೈರಸ್ ಎಂದು ಹೇಳುವ ಮೂಲಕ ಯೋಗಿ ಆದಿತ್ಯನಾಥ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕೇರಳದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

ಈ ವಿಷಯದಲ್ಲಿ ಕೇಂದ್ರ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ನಿಜವಾಗಿಯೂ ಭಾರತಕ್ಕೆ ಬಾಧಿಸಿರುವ ವೈರಸ್ ಬಿಜೆಪಿ. ಜನರ ನಡುವೆ ಜಗಳ ತಂದಿಟ್ಟು, ಕೋಮುವಾದದ ಭಾವನೆ ಕೆರಳುವಂತೆ ಮಾಡುವ ಪಕ್ಷ ಬಿಜೆಪಿ ಎಂದಿದ್ದಾರೆ ಚೆನ್ನಿತ್ತಲ.

ಆದಾಗ್ಯೂ,ಹಿಂದೂಗಳಿಗೆ ಹೆದರಿ ರಾಹುಲ್ ವಯನಾಡಿನಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಮೋದಿ ವಯನಾಡಿನ ಜನರನ್ನು ಅವಮಾನಿಸಿದ್ದಾರೆ.

ವಯನಾಡಿನಲ್ಲಿ ಶೇ. 52ರಷ್ಟು ಹಿಂದೂಗಳಿದ್ದಾರೆ. ಎಲ್ಲ ಜಾತಿ- ಮತ – ಧರ್ಮಗಳಿಗೆ ಸೇರಿದ ಜನರು ಇಲ್ಲಿ ಜತೆಯಾಗಿ ಬದುಕುತ್ತಿರುವಾಗ ಅವರನ್ನು ಜಾತಿ, ಧರ್ಮದ ಹೆಸರಿನಿಂದ ವಿಭಜಿಸುವ ಈ ಹೇಳಿಕೆಗಳು ಆಕ್ಷೇಪಾರ್ಹ. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಎಂಬ ವೈರಸ್‌ನ್ನು ಹೊಡೆದೋಡಿಸಲಿದ್ದಾರೆ ಎಂದು ಚೆನ್ನಿತ್ತಲ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!