ಕಾರವಾರ: ”ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಯ ಸಾಕ್ಷ್ಯವನ್ನು ಕಾಂಗ್ರೆಸ್ ಕೇಳುತ್ತಿದೆ. ಆದರೆ ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವುದಕ್ಕೆ ಸಾಕ್ಷಿ ಕೊಡುತ್ತಾರಾ” ಎಂದು ಪ್ರಶ್ನಿಸುವ ಮೂಲಕ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೂಗ್ತಿ ಮಹಾಸತಿ ದೇವಸ್ಥಾನದಲ್ಲಿ ನಡೆದ ತಾಯ್ನೆಲದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಅಪ್ಪ ಮುಸಲ್ಮಾನ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಈ ಪರದೇಶಿ ಬ್ರಾಹ್ಮಣ ಹೇಗಾದ ಎನ್ನುವುದಕ್ಕೆ ಡಿಎನ್‍ಎ ಸಾಕ್ಷಿ ಕೊಡುತ್ತಾರಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉಗ್ರರ ದಾಳಿಗೆ ಬಲಿಯಾದಾಗ ಅವರ ದೇಹ ಛಿದ್ರ ಛಿದ್ರವಾಗಿತ್ತು. ಮೃತದೇಹವನ್ನು ಪತ್ತೆ ಹಚ್ಚಲು, ಡಿಎನ್‍ಎ ಪರೀಕ್ಷೆಗೆ ಮಕ್ಕಳ ರಕ್ತದ ಮಾದರಿ ನೀಡುವಂತೆ ಸೋನಿಯಾ ಗಾಂಧಿಗೆ ಕೇಳಲಾಗಿತ್ತು. ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ರಕ್ತದ ಮಾದರಿ ಬೇಡ, ಪ್ರಿಯಾಂಕಾ ಗಾಂಧಿ ರಕ್ತವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಅಂತಹವರು ಈಗ ಏರ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದ್ದಾರೆ” ಎಂದು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದರು.
”ಮೆಣಸಿನಕಾಯಿ ಗಿಡದಲ್ಲಿ ತೆಂಗಿನ ಕಾಯಿ ಬಿಡುತ್ತದೆ ಎನ್ನುವ ಸಾಕ್ಷಿ ಗಾಂಧಿ ಕುಟುಂಬದಲ್ಲಿ ಇರಬಹುದು. ಆದರೆ ನಮ್ಮಲ್ಲಿ ಅಂತಹ ಸಾಕ್ಷಿಗಳಿಲ್ಲ” ಎಂದು ವ್ಯಂಗ್ಯವಾಡಿದರು.