janadhvani

Kannada Online News Paper

‘ಹಿಂದೂ’ ಅದು ಧರ್ಮವಲ್ಲ- ಸಿ.ಬಸವಲಿಂಗಯ್ಯ

ಬೆಂಗಳೂರು, ಮಾ.10-ಹಿಂದೂ ರಾಷ್ಟ್ರಬೇಕೆಂದು ಮನುವಾದಿಗಳು ಹೇಳುತ್ತಿದ್ದಾರೆ. ಆದರೆ, ಅದು ಧರ್ಮ ಅಲ್ಲ. ಅದೊಂದು ಸಂಸ್ಕೃತಿ ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮ ಇಲ್ಲ ಎಂದು ರಾಷ್ಟ್ರೀಯ ನಾಟಕ ಶಾಲೆ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.

ನಗರದ ಗಾಂಧಿಭವನದಲ್ಲಿಂದು ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ಸಮಾನತೆ, ಸಾಮಾಜಿಕ ನ್ಯಾಯ, ಮನುವಾದ ಮುಕ್ತ ಭಾರತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಬ್ರಾಹ್ಮಣರು ಮನುವಾದಿಗಳಲ್ಲ.

ಸಾಮಾನ್ಯ ಜನರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಕಲೆ ಅವರಿಗೆ ಗೊತ್ತಿದೆ. ನಮ್ಮ ಜನ ಅವರ ಹಿಂಬಾಲಕರಾಗಿದ್ದಾರೆ. ತಮ್ಮ ಹಿಂಬಾಲಕರಲ್ಲಿ ಮನುವಾದಿಗಳ ಸಿದ್ಧಾಂತವನ್ನು ವ್ಯವಸ್ಥಿತವಾಗಿ ತುಂಬಲಾಗಿದೆ ಎಂದು ಹೇಳಿದರು.

ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮ, ಪೋಷಕರು ಇಲ್ಲ ಎಂದು ಪುನರುಚ್ಚರಿಸಿದರು. ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮನುವಾದಿಗಳು ತಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.

ತಿನ್ನುವ ಊಟ, ತೊಡುವ ಬಟ್ಟೆ, ನಡೆದುಕೊಳ್ಳುವ ರೀತಿ, ನೀತಿಗಳಿಂದಲೂ ಎಲ್ಲವನ್ನೂ ತಮ್ಮ ಸಿದ್ಧಾಂತಕ್ಕನುಗುಣವಾಗಿಯೇ ನಡೆಯಬೇಕು ಎಂಬ ವಾದ ಮಾಡುತ್ತಿದ್ದಾರೆ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೋಮುವಾದಿಗಳು ಸಂವಿಧಾನವನ್ನೇ ಬದಲಾಯಿಸುವ ಮಾತುಗಳನ್ನಾಡುತ್ತಿರುವುದು ವಿಷಾದನೀಯ ಎಂದರು.

ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ, ರಾಷ್ಟ್ರೀಯ ಸಮಿತಿ ಸದಸ್ಯ ನಾಗರಾಜ ನಂಜುಂಡಯ್ಯ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

error: Content is protected !! Not allowed copy content from janadhvani.com