ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಮತ ಚಲಾಯಿಸಲು ನಿಮ್ಮ ಬಳಿ ವೋಟರ್ ಐಡಿಯೇ ಬೇಕೆಂದಿಲ್ಲ. ಪ್ರತೀ ಬಾರಿ ಮತದಾರ ಮತಗಟ್ಟೆಯ ಅಧಿಕಾರಿಗೆ ತನ್ನ ವೋಟರ್ ಐಡಿ ತೋರಿಸಬೇಕಿತ್ತು. ಅದಾದ ನಂತರ ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ಎಂಬುದನ್ನು ನೋಡಿದ ನಂತರ ಚುನಾವಣಾಧಿಕಾರಿ ಮತಹಾಕಲು ಅನುಮತಿ ನೀಡುತ್ತಿದ್ದರು. ಆದರೆ ಈ ಬಾರಿ ವೋಟರ್ ಐಡಿ ಇಲ್ಲದಿದ್ದರೂ ನೀವು ಮತಹಾಕಬಹುದು. ಹೇಗೆ? ಉತ್ತರ ಇಲ್ಲಿದೆ.
ಭಾನುವಾರ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಸುನೀಲ್ ಅರೋರಾ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಘೋಷಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮಾಧ್ಯಮಗೋಷ್ಠಿ ನಡೆಸಿದರು. ಗೋಷ್ಠಿಯಲ್ಲಿ ಚುನಾವಣೆಯ ರೂಪುರೇಷೆಗಳ ಬಗ್ಗೆ ಮಾತನಾಡಿದ ಸಂಜೀವ್ ಕುಮಾರ್ ಈ ಬಾರಿ ಮತದಾನದ ವೇಳೆ ವೋಟರ್ ಐಡಿ ತೋರಿಸುವುದು ಕಡ್ಡಾಯವಲ್ಲ ಎಂಬ ಮಾಹಿತಿ ನೀಡಿದ್ದಾರೆ.
ವೋಟರ್ ಪಟ್ಟಿಯಲ್ಲಿ ಮತದಾರನ ಹೆಸರಿದ್ದರೆ ಸಾಕು ಜತೆಗೆ ಗುರುತಿನ ಚೀಟಿ ಯಾವುದಾದರೂ ಒಂದನ್ನು ತೋರಿಸಬೇಕು. ಗುರುತಿನ ಚೀಟಿಯಲ್ಲಿರುವ ಹೆಸರು, ಭಾವಚಿತ್ರ ಮತ್ತು ವೋಟರ್ ಪಟ್ಟಿಯಲ್ಲಿರುವ ಹೆಸರಿಗೂ ಹೊಂದಿಕೆಯಾದರೆ ಮತದಾನ ಮಾಡಬಹುದು. ಈ ಹಿಂದೆ ವೋಟರ್ ಐಡಿ ಕಳುವಾದರೆ ಅಥವಾ ತರುವುದನ್ನು ಮರೆತಿದ್ದರೆ ಮತದಾನ ಮಾಡಲು ಆಗುತ್ತಿರಲಿಲ್ಲ. ಆದರೀಗ ಚುನಾವಣಾ ಆಯೋಗದ ಹೊಸ ನೀತಿಯಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.