ಅಯೋಧ್ಯೆ ನಿವೇಶನ ವಿವಾದ-ಸಂಧಾನದ ಮೂಲಕ ಪರಿಹರಿಸಿ-ಸುಪ್ರೀಂ

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಧಾನದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಸಂಧಾನಕ್ಕಾಗಿ ಸಮಿತಿಯೊಂದನ್ನೂ ರಚಿಸಲಾಗಿದೆ. ಈ ಸಮಿತಿಗೆ ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಅವರು ಅಧ್ಯಕ್ಷರಾಗಿರಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.

ಸಂಧಾನ ಪ್ರಕ್ರಿಯೆಯನ್ನು ಫೈಜಾಬಾದ್‌ನಲ್ಲಿ ನಡೆಸಬೇಕು ಮತ್ತು ಸಂಪೂರ್ಣವಾಗಿ ಚಿತ್ರೀಕರಿಸಬೇಕು. ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಅವರೂ ಸಂಧಾನ ಸಮಿತಿಯಲ್ಲಿರಬೇಕು ಎಂದು ಸಂವಿಧಾನ ಪೀಠ ಹೇಳಿದೆ.

ಸಂಧಾನ ಪ್ರಕ್ರಿಯೆ ನಾಲ್ಕು ವಾರಗಳ ಒಳಗೆ ಆರಂಭಗೊಂಡು ಎಂಟು ವಾರಗಳ ಒಳಗೆ ಪೂರ್ಣಗೊಳ್ಳಬೇಕು. ನಾಲ್ಕು ವಾರಗಳ ಒಳಗೆ ಸಂಧಾನ ಸಮಿತಿಯು ಮೊದಲ ವರದಿ ಸಲ್ಲಿಸಬೇಕು. ಸಂಧಾನಕಾರರಿಗೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸೌಲಭ್ಯ ಒದಗಿಸಬೇಕು. ಅಗತ್ಯವೆನಿಸಿದಲ್ಲಿ ಸಂಧಾನಕಾರರು ಹೆಚ್ಚಿನ ಕಾನೂನು ಸಹಕಾರ ಪಡೆಯಬಹುದು ಎಂದೂ ಪೀಠ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ವಿಚಾರಣೆ ನಡೆಸಿದ್ದ ಸಂವಿಧಾನ ‍ಪೀಠ, ಸಂಧಾನದ ಸಲಹೆ ನೀಡಿತ್ತು. ಆದರೆ, ನಿರ್ಮೋಹಿ ಅಖಾಡ ಹೊರತುಪಡಿಸಿದಂತೆ ಉಳಿದ ಹಿಂದುತ್ವಪರ ಸಂಘಟನೆಗಳು ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವುಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮುಸ್ಲಿಂ ಸಂಘಟನೆಗಳು ಪ್ರಸ್ತಾವವನ್ನು ಸ್ವಾಗತಿಸಿದ್ದವು. ಒಮ್ಮತ ಮೂಡದ್ದರಿಂದ ನ್ಯಾಯಾಲಯ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು.

ಮಾಧ್ಯಮಗಳಿಗೆ ನಿರ್ಬಂಧ: ಗೋಪ್ಯತೆ ಕಾಪಾಡುವ ನಿಟ್ಟಿನಲ್ಲಿ ಸಂಧಾನ ಪ್ರಕ್ರಿಯೆಯ ವರದಿ ಮಾಡಲು ಮಾಧ್ಯಮಗಳಿಗೆ ಅವಕಾಶ ನೀಡಬಾರದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.

Leave a Reply

Your email address will not be published. Required fields are marked *

error: Content is protected !!