ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿನ ಎಲ್ಲಾ ಕೆಲಸಗಾರರ ಉದ್ಯೋಗ ಒಪ್ಪಂದವನ್ನು ಆನ್‌ಲೈನ್ ಮೂಲಕ ಪ್ರಾರಂಭಿಸುವ ಯೋಜನೆಯನ್ನು ಏಪ್ರಿಲ್ 7 ರಂದು ಆರಂಭಿಸಲಾಗುವುದು ಎಂದು ಕಾರ್ಮಿಕ ಸಚಿವಾಲಯ ಘೋಷಿಸಿದೆ. ಕಾರ್ಮಿಕ ಸಚಿವಾಲಯವು ಹೊಸ ಒಪ್ಪಂದದ ಬಗ್ಗೆ ಪರಿಣಿತರಿಂದ ಪ್ರತಿಕ್ರಿಯೆಯನ್ನು ಪಡೆದಿದೆ.
ಕಾರ್ಮಿಕ ಸಚಿವಾಲಯದ ವೆಬ್ ಸೈಟ್ ಮೂಲಕ ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ. ನಾಲ್ಕು ಹಂತಗಳಲ್ಲಿ ಪ್ರಾರಂಭಿಸಲಾಗುವ ಈ ಯೋಜನೆಯನ್ನು ಅಳವಡಿಸಲಾಗುತ್ತಿದ್ದು, 3000ಕ್ಕಿಂತಲೂ ಹೆಚ್ಚು ನೌಕರರಿರುವ ಬೃಹತ್ ಕಂಪೆನಿಗಳಲ್ಲಿ ಏಪ್ರಿಲ್ 7ರಂದು ಪ್ರಾರಂಭವಾಗಲಿದೆ. 500 ರಿಂದ 3000 ಕಾರ್ಮಿಕರ ಒಳಗಿರುವ ಸ್ಥಾಪನೆಯಲ್ಲಿ ಮೇ 6ರಿಂದ ಆನ್‌ಲೈನ್ ಪ್ರಕ್ರಿಯೆ ಆರಂಭವಾಗಲಿದೆ.
50 ರಿಂದ 500 ಉದ್ಯೋಗಿಗಳ ನಡುವೆ ಕಾರ್ಮಿಕರಿರುವ ಕಂಪೆನಿಗಳಲ್ಲಿ ಜುಲೈ 4ರಿಂದ ಹೊಸ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಡಿಸೆಂಬರ್ ಅಂತ್ಯದ ವೇಳೆಗೆ, ಎಲ್ಲ ಸಂಸ್ಥೆಗಳನ್ನು ಆನ್ ಲೈನ್ ಸಿಸ್ಟಮ್ ಅಡಿಯಲ್ಲಿ ತರಲಾಗುವುದು. 50ಕ್ಕಿಂತ ಕಡಿಮೆ ಕಾರ್ಮಿಕರಿರುವ ಕಂಪೆನಿಗಳಲ್ಲಿ ಆನ್ಲೈನ್ ಒಪ್ಪಂದವನ್ನು ಆಗಸ್ಟ್ 3 ರಿಂದ ಜಾರಿಗೊಳಿಸಲಾಗುವುದು.
ಉದ್ಯೋಗದಾತ ಮತ್ತು ಉದ್ಯೋಗಿಗಳ ಹಕ್ಕುಗಳ ಸಂಪೂರ್ಣ ರಕ್ಷಣೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಉದ್ಯೋಗದ ಒಪ್ಪಂದವನ್ನು ಆನ್‌ಲೈನ್ ಮೂಲಕ ಮಾಡಲಾತ್ತದೆ ಎಂದು ಸಚಿವಾಲಯ ತಿಳಿಸಿದೆ.