ಭಾರತ-ಪಾಕ್: ದಟ್ಟೈಸುತ್ತಿದೆ ಯುದ್ಧದ ಕಾರ್ಮೋಡಗಳು

ನೌಷೇರಾ, ಫೆ.27- ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್‍ನ ಜೈಷ್ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ಮಿಂಚಿನ ದಾಳಿ ನಡೆಸಿ 350ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿ ಕ್ಯಾಂಪ್‍ಗಳನ್ನು ನಿರ್ನಾಮ ಮಾಡಿದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟೈಸುತ್ತಿವೆ.

ಇದಕ್ಕೆ ಇಂಬು ನೀಡುವಂತೆ ಇಂದು ಬೆಳಗ್ಗೆ ಪಾಕಿಸ್ತಾನದ ಮೂರು ಸಮರ ವಿಮಾನಗಳು ಭಾರತ ವಾಯುಗಡಿ ಸರಹದ್ದನ್ನು ಉಲ್ಲಂಘಿಸಿ ಕಾಶ್ಮೀರ ಕಣಿವೆಯ ನೌಷೆರಾ ಮತ್ತು ರಜೌರಿ ಪ್ರದೇಶಗಳಿಗೆ ನುಗ್ಗಿದವು.

ಸ್ಥಳೀಯರ ಪ್ರಕಾರ ಈ ವಿಮಾನಗಳು ಗಡಿ ಪ್ರದೇಶದ ಬಳಿ ಕೆಲವು ಬಾಂಬ್‍ಗಳನ್ನು ಎಸೆದಿವೆ ಎಂದು ವರದಿಯಾಗಿದೆ. ಆದರೆ, ಅದು ಖಚಿತಪಟ್ಟಿಲ್ಲ. ಪಾಕಿಸ್ತಾನದ ಸಮರ ವಿಮಾನಗಳು ಭಾರತದ ಗಡಿಯೊಳಗೆ ನುಸುಳಿದ ಸುದ್ದಿ ತಿಳಿದ ಮರುಕ್ಷಣವೇ ವಾಯುನೆಲೆಯಲ್ಲಿ ಸರ್ವಸನ್ನದ್ಧವಾಗಿದ್ದ ಭಾರತೀಯ ಫೈಟರ್ ಜೆಟ್‍ಗಳು ಕಾರ್ಯಾಚರಣೆಗೆ ಇಳಿದವು.

ಫೈಟರ್ ಜೆಟ್‍ಗಳು ಕಾರ್ಯೋನ್ಮುಖವಾಗಿರುವುದನ್ನು ಕಂಡು ಹೆದರಿದ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ತಕ್ಷಣ ತಮ್ಮ ನೆಲೆಗಳಿಗೆ ಹಿಂದಿರುಗಿದವು ಎಂದು ಉನ್ನತ ಮೂಲಗಳು ತಿಳಿಸಿವೆ.

ಬಾಲಕೋಟ್ ದಾಳಿ ನಂತರ ಕಾಶ್ಮೀರ ಗಡಿಯಲ್ಲಿ ಯಾವುದೇ ಕ್ಷಣ ಉದ್ಭವಿಸಬಹುದಾದ ಸಂಭವನೀಯ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ದೇಶದ ಎಲ್ಲ ವಾಯುನೆಲೆಗಳಲ್ಲೂ ಭಾರತದ ಯುದ್ಧ ವಿಮಾನಗಳು ಸರ್ವಸನ್ನದ್ಧವಾಗಿ ಸಜ್ಜಾಗಿವೆ.

ಬಾಲಕೋಟ್ ವೈಮಾನಿಕ ದಾಳಿ ನಂತರ ತಕ್ಕ ಪ್ರತ್ಯುತ್ತರ ನೀಡುವುದಾಗಿ ನಿನ್ನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಮತ್ತು ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಎಚ್ಚರಿಕೆ ನೀಡಿದ್ದರು.

ಭಾರತವು ಪಾಕಿಸ್ತಾನ ವಾಯು ಗಡಿ ಸರಹದ್ದು ಉಲ್ಲಂಘಿಸಿ ದಾಳಿ ನಡೆಸಿದೆ. ಇದರಿಂದ ಆ ದೇಶದ ಮೇಲೆ ಪ್ರತಿದಾಳಿ ನಡೆಸುವ ಅಧಿಕಾರ ತನಗಿದೆ ಎಂದು ಸರ್ಕಾರ ನಿನ್ನೆ ಹೇಳಿತ್ತು. ಅದರ ಬೆನ್ನಲ್ಲೇ ಇಂದು ಬೆಳಗ್ಗೆ ನೌಷೇರಾ ಮತ್ತು ರಜೌರಿ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದ ಮೂರು ಸಮರ ವಿಮಾನಗಳು ಹಾರಾಡಿ ದಾಳಿಗೆ ಯತ್ನಿಸಿವೆ.

ಭಾರತದ ಪ್ರತಿದಾಳಿ ಭೀತಿಯಿಂದ ಪಾಕ್ ಫೈಟರ್‍ಜೆಟ್‍ಗಳು ತಮ್ಮ ವಾಯುನೆಲೆಗೆ ಹಿಂದಿರುಗಿವೆ. ಈ ಘಟನೆ ನಂತರ ಕಾಶ್ಮೀರ ಕಣಿವೆ ಸೇರಿದಂತೆ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಎದುರಾಗಬಹುದಾದ ಯಾವುದೇ ಗಂಡಾಂತರಕಾರಿ ಸನ್ನಿವೇಶ ಎದುರಿಸಲು ಭಾರತೀಯ ಭೂಸೇನೆ, ವಾಯುಪಡೆ ಹಾಗೂ ನೌಕಾದಳ ಸರ್ವಸನ್ನದ್ಧವಾಗಿವೆ.

ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಮಹತ್ವದ ಸಭೆ ನಡೆಸಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ಸಂಬಂಧಪಟ್ಟ ಉನ್ನತಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಒಟ್ಟಾರೆ ಕಾಶ್ಮೀರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದ್ದು, ಆತಂಕದ ಸ್ಥಿತಿ ಎದುರಾಗಿದೆ. ಉಭಯ ದೇಶಗಳು ಸಂಯಮ ಕಾಪಾಡುವಂತೆ ಈಗಾಗಲೇ ವಿಶ್ವಸಂಸ್ಥೆ, ಐರೋಪ್ಯ ಸಮುದಾಯ ಮತ್ತು ಅಮೆರಿಕ ಸಲಹೆ ಮಾಡಿದೆ. ಪರಿಸ್ಥಿತಿ ಉಲ್ಬಣಗೊಂಡಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಧಾನ ಯತ್ನಗಳು ಮುಂದುವರಿದಿವೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!