janadhvani

Kannada Online News Paper

ಜಾಲ ತಾಣಗಳಲ್ಲಿ ಗಣ್ಯ ವ್ಯಕ್ತಿಗಳ ತೇಜೋ ವಧೆಗೆ ಕಡಿವಾಣ- ಮುಖ್ಯಮಂತ್ರಿ

ಬೆಂಗಳೂರು, ಫೆ.25- ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯವಾಗಿ ಗಣ್ಯ ವ್ಯಕ್ತಿಗಳ ತೇಜೋ ವಧೆ ನಡೆಯುತ್ತಿದೆ. ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಹೊಸ ನಿಯಮಾವಳಿಗಳನ್ನು ರೂಪಿಸಲಾಗುವುದು. ಸೈಬರ್ ಕ್ರೈಂ ಅನ್ನು ಹದ್ದುಬಸ್ತಿನಲ್ಲಿಡಲು ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಮಹಾ ಸಮಾವೇಶದ ನಂತರ ಮಾತನಾಡಿದರು. ಔರಾದ್ಕರ್ ಅವರ ವರದಿ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ನಿರಂತರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮಾಡಲಾಗುವ ತೇಜೋ ವಧೆಯನ್ನು ತಡೆಗಟ್ಟಲು ಕೆಲ ನಿಯಮಗಳ ಅಗತ್ಯವಿದೆ. ಸೈಬರ್ ಕ್ರೈಂ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು.

ರಾಜ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳ ಸಂದರ್ಭಗಳಲ್ಲಿ ಬೆಂಕಿ ನಂದಿಸಲು ಅಗತ್ಯ ಕ್ರಮ ವಹಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಂಡೀಪುರದಲ್ಲಿ ಹಬ್ಬಿರುವ ಬೆಂಕಿಯ ಕೆನ್ನಾಲಿಗೆಯ ನಿಯಂತ್ರಣಕ್ಕೆ ನಾಲ್ಕು ಹೆಲಿಕಾಪ್ಟರ್‍ಗಳನ್ನು ರಕ್ಷಣಾ ಇಲಾಖೆ ಒದಗಿಸಿದೆ. ನುಗು ಡ್ಯಾಂನಿಂದ ನೀರನ್ನು ತಂದು ಬೆಂಕಿ ಹತೋಟಿಗೆ ತರಲಾಗುವುದು.

8 ರಿಂದ 10 ಸಾವಿರ ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು , ಸದ್ಯಕ್ಕೆ ನಿಯಂತ್ರಣದಲ್ಲಿದೆ. ಪ್ರತಿ ವರ್ಷ ಬೆಂಕಿ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಅರಿವು ಮೂಡಿಸಲಾಗುತ್ತಿದೆ. ಇಂತಹ ಅವಘಡ ರಾಜ್ಯದಲ್ಲಿ ಮಾತ್ರ ಆಗಿಲ್ಲ. ಕ್ಯಾಲಿಫೋರ್ನಿಯಾದಲ್ಲೂ ನಡೆದಿದೆ. ಇದು ನೈಸರ್ಗಿಕ ವಿಪತ್ತು ಎಂದರು.

ಇಲಾಖೆಗೆ ಇನ್ನಷ್ಟು ಮೂಲ ಸೌಲಭ್ಯ ಹಾಗೂ ಕೆಲವು ಬದಲಾವಣೆ ತರುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತರದೆ ಉತ್ತಮವಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಸದ್ಯದಲ್ಲೇ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಕಳೆದ 8-10 ತಿಂಗಳಿನಿಂದ ಹೊಸ ಸರ್ಕಾರ ಬಂದ ನಂತರ ಕೋಮು ಗಲಭೆ ಸೇರಿದಂತೆ ಯಾವುದೇ ಗಲಭೆಗಳು ಆಗದಂತೆ ಅಧಿಕಾರಿಗಳು ಕೆಲಸ ಮಾಡಿದ್ದಾರೆ.

ಇನ್ನು ಉತ್ತಮವಾಗಿ ಕೆಲಸ ಮಾಡಲು ಸಲಹೆ ನೀಡಿದ್ದೇನೆ ಎಂದರು. ನಾಡಿನ ಜನ ತಮಗೆ ತೊಂದರೆಯಾದಾಗ ನಿರ್ಭೀತಿಯಿಂದ ಠಾಣೆಗೆ ಹೋಗಿ ದೂರು ನೀಡುವಂತಹ ವಾತಾವರಣ ನಿರ್ಮಿಸಬೇಕು. ಅದಕ್ಕಾಗಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಸೂಚನೆ ನೀಡಿದ್ದೇನೆ.

error: Content is protected !! Not allowed copy content from janadhvani.com