janadhvani

Kannada Online News Paper

ರಾಜಕೀಯ ಮಾಡುವ ಸಲುವಾಗಿ ಯೋಧರನ್ನು ಸಾವಿಗೀಡಾಗಲು ಬಿಟ್ಟರು- ಮಮತಾ ಆರೋಪ

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಪುಲ್ವಾಮಾ ದಾಳಿಯ ಬಗ್ಗೆ ಗುಪ್ತಚರ ಮಾಹಿತಿ ಇದ್ದರೂ ಸಹ ಯಾವುದೇ ಕ್ರಮಕೈಗೊಳ್ಳಲಿಲ್ಲ, ‘ಯೋಧರ ಶವಗಳ ಮೇಲೆ ರಾಜಕೀಯ’ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಇಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ ಕೋರ್‌ ಕಮಿಟಿ ಸಭೆಯನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಮಾತನಾಡಿದರು. ‘ನಿರಂಕುಶವಾದ ನರೇಂದ್ರ ಮೋದಿ ಸರ್ಕಾರ’ವನ್ನು ಮುಂಬರುವ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಪಶ್ಚಿಮ ಬಂಗಾಳದ ಎಲ್ಲ 42 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಕ್ಕೆ ದಾಳಿಯ ಮುನ್ಸೂಚನೆ ದೊರೆತಿರುತ್ತದೆ, ಗುಪ್ತಚರ ಮಾಹಿತಿಗಳು ಸಿಕ್ಕಿರುತ್ತವೆ. ಹಾಗಾದರೆ, ಯೋಧರನ್ನು ರಕ್ಷಿಸಲು ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ಈ ಮೂಲಕ ಸರ್ಕಾರ ಯೋಧರ ಶವಗಳನ್ನು ಮುಂದಿಟ್ಟುಕೊಂಡು ‘ಚುನಾವಣೆಯಲ್ಲಿ ರಾಜಕೀಯ ಮಾಡುವ ಸಲುವಾಗಿ ಯೋಧರನ್ನು ಸಾವಿಗೀಡಾಗಲು ಬಿಟ್ಟರು’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

‘ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ವೇಳೆ ಯುದ್ಧ ವಾತಾರಣ ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ’ ಎಂದರು.

ಕೇಂದ್ರ ಸರ್ಕಾರ ವಿಚಿತ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಕೇಂದ್ರ ಸಚಿವರಿಗೆ ಪ್ರಮುಖ ನಿರ್ಧಾರಗಳ ಕುರಿತು ಅರಿವಿಲ್ಲ. ಈ ಸರ್ಕಾರವು ಪ್ರಧಾನಿ ಇಬ್ಬರು ಸಹೋದರರಿಂದ(ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ) ನಡೆಯುತ್ತಿದೆ, ಅವರ ಕೈಗಳಿಗೆ ಮುಗ್ಧರ ರಕ್ತ ಅಂಟಿದೆ ಎಂದು ಹೇಳಿದರು.

‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವಿಎಂಗಳನ್ನು ದುರ್ಬಳಕೆ ಮಾಡುವ ಪ್ರಯತ್ನಗಳ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಅವರ ಪ್ರಯತ್ನಗಳನ್ನು ತಡೆಯಬೇಕು’ ಎಂದು ಮಮತಾ ಕರೆ ನೀಡಿದರು.

error: Content is protected !! Not allowed copy content from janadhvani.com