janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ-ರಾಜ್ಯಪಾಲರಿಂದ ಶಂಕುಸ್ಥಾಪನೆ

ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲ ವಜುಭಾಯಿ ವಾಲಾ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

132.24 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ಟ್ರಮಿನಲ್ ವಿಸ್ತಾರ 19,509 ಚದರ ಮೀಟರ್ ಇದೆ. ಹೊಸದಾಗಿ 11,343 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ನಿರ್ಮಿಸಲಾಗುತ್ತದೆ.

ಈಗ ದಟ್ಟಣೆಯ ಅವಧಿಯಲ್ಲಿ ಪ್ರತಿ ಗಂಟೆಗೆ 730 ಪ್ರಯಾಣಿಕರಿಗೆ ಬೋರ್ಡಿಂಗ್ ಅವಕಾಶ ಕಲ್ಪಿಸುವ ಸಾಮರ್ಥ್ಯ ಇದೆ. ಹೊಸ ಟರ್ಮಿನಲ್ ನಿರ್ಮಾಣದ ಬಳಿಕ ಪ್ರತಿ ಗಂಟೆಗೆ 1,000 ಪ್ರಯಾಣಿಕರಿಗೆ ಬೋರ್ಡಿಂಗ್‌ಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ದೊರಕಲಿದೆ.

ವಾರ್ಷಿಕ ಪ್ರಯಾಣಿಕರ ಸಂಕ್ಯೆ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಲಿದೆ.

ಅಂತರರಾಷ್ಟ್ರೀಯ ಪ್ರಯಾಣಿಕರ ವಿಭಾಗದಲ್ಲಿ ಎರಡು ಹೊಸ ಬ್ಯಾಗೇಜ್ ಕನ್ವೆಯರ್ ಮತ್ತು ದೇಶೀಯ ಪ್ರಯಾಣಿಕರ ವಿಭಾಗದಲ್ಲಿ ಒಂದು ಹೊಸ ಕನ್ವೆಯರ್ ಅಳವಡಿಸಲಾಗುತ್ತದೆ. ಎರಡು ಹೊಸ ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.

ಪ್ರಯಾಣಿಕರ ವಿಶ್ರಾಂತಿಗೆ ಬೃಹತ್ ಕೊಠಡಿ, ಉಪಾಹಾರ ಗೃಹ, ಪ್ರಯಾಣಿಕರ ಭೇಟಿಗೆ ಸ್ಥಳಾವಕಾಶ, ಪ್ರಥಮ‌ ಚಿಕಿತ್ಸಾ ಕೊಠಡಿಗಳನ್ನು ಈ ಯೋಜನೆಯಲ್ಲಿ ನಿರ್ಮಿಸಲಾಗುತ್ತದೆ.

ದೇಶದ ಎಂಟು ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ದೆಹಲಿಯಲ್ಲಿ ಚಾಲನೆ ನೀಡಿದರು. ಮಂಗಳೂರಿನಲ್ಲಿ ರಾಜ್ಯಪಾಲರು ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಭಾಸ್ಕರ್ ಕೆ., ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com