janadhvani

Kannada Online News Paper

ಸುನ್ನೀ ಸಂಘಟನೆಗಳ ಸಮನ್ವಯ ಶಕ್ತಿಯಾಗಿದೆ ಕೆಸಿಎಫ್ – ಕತ್ತರ್ ನಲ್ಲಿ ಉಮರ್ ಸಖಾಫಿ ಎಡಪಾಲಂ

ಕರ್ನಾಟಕ ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸುನ್ನಿ ಸಂಘಟನೆಗಳ ಒಂದು ಸಮನ್ವಯ ಶಕ್ತಿಯಾಗಿದೆ ಅನಿವಾಸಿ ಕನ್ನಡಿಗರ
ಕೆಸಿಫ್ ಎಂಬ ಸುನ್ನಿಸಂಘಟನೆಯೆಂದು ಕರ್ನಾಟಕ ರಾಜ್ಯ SYS, ಇಸ್ವಾಬ ನಿರ್ದೇಶಕರಾದ ಎಡಪಾಲಂ ಉಮರ್ ಸಖಾಫಿಯವರು ಹೇಳಿದರು.
ಅವರು ದೋಹಾದಲ್ಲಿ ನಡೆದ ಕೆಸಿಎಫ್ ಡೇ (KCF Day) ಪ್ರಯುಕ್ತ ಕೆಸಿಎಫ್ ಕತ್ತರ್ ರಾಷ್ಟ್ರೀಯ ಸಮಿತಿಯು ಆಯೋಜಿಸಿದ್ದ ಅವೇಕ್-2019 (AWAKE-2019) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಅಲೈಕುಂ ಬಿಲ್ ಜಮಾಅ: (ಸಂಘಟನೆಯೊಂದಿಗೆ ಮುನ್ನೆಡೆಯಿರಿ) ಎಂಬ ಘೋಷ ವಾಕ್ಯದೊಂದಿಗೆ ವಿವಿಧ ರಾಷ್ಟ್ರಗಳಲ್ಲಿ ಕೆಸಿಎಫ್ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಸಂಘಟನೆಯ ಧ್ಯೇಯ ಧೋರಣೆಗಳು, ಉದ್ದೇಶ, ನೀತಿ ನಿಲುವುಗಳು, ಕಾರ್ಯರೂಪ ಮತ್ತು ಕಾರ್ಯಕರ್ತರಲ್ಲಿರಬೇಕಾದ ಬದ್ಧತೆ ಮತ್ತು ಮೌಲ್ಯಗಳ ಬಗ್ಗೆ ಅವರು ತರಬೇತಿ ನೀಡಿದರು.

ಸುಮಾರು 6 ವರ್ಷಗಳಿಂದ ಎಲ್ಲಾ GCC ರಾಷ್ಟ್ರಗಳು, ಇಂಗ್ಲೆಂಡ್ ಮತ್ತು ಮಲೇಶಿಯಾದಲ್ಲಿ ಅನಿವಾಸಿಗಳಾಗಿರುವ ಮುಸ್ಲಿಂ ಕನ್ನಡಿಗರ ಆಶಾಕೇಂದ್ರವಾಗಿ ಕೆಸಿಫ್ ಬೆಳೆಯುತ್ತಿದ್ದು, ಇಸ್ಲಾಮಿನ ಪಾರಂಪರಿಕ ಮೌಲ್ಯಗಳು ಮತ್ತು ಧ್ಯೇಯಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಒಳಿತಿಗಾಗಿ ಸಾವಿರಾರು ಕಾರ್ಯಕರ್ತರು ಅಹರ್ನಿಶಿ ದುಡಿಯುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆಸಿಎಫ್ ಡೇ ಸ್ವಾಗತ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಆಶ್ರಫಿ ಉಸ್ತಾದರು ಯಾವುದೇ ಸಂಘಟನೆಯತ್ತ ಜನರನ್ನು ಆಕರ್ಷಿಸಲು ಆ ಸಂಘಟನೆಯ ಸಾಧನೆಗಳ ಬಗ್ಗೆ ಅರಿವುಮೂಡಿಸುವುದು ಮುಖ್ಯವಾಗಿದ್ದು, ಹಲವಾರು ಸಮಾಜಮುಖಿ ಸಾಧನೆಗಳ ಪರಂಪರೆಯೇ ನಮ್ಮಲ್ಲಿದ್ದು ಅವುಗಳ ಬಗ್ಗೆ ಜನರೆಡೆಯಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿದರು.

ಕೆಸಿಎಫ್ ಕತ್ತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಬ್ದುರ್ರಹೀಮ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಕೆಸಿಎಫ್ ಇಹ್ಸಾನ್ ವಿಭಾಗವು ಉತ್ತರ ಕರ್ನಾಟಕದಲ್ಲಿ ನಡೆಸುತ್ತಿರುವ ಪ್ರಗತಿಪರ ಕಾರ್ಯಕ್ರಮಗಳೊಂದಿಗೆ ಇದೀಗ ಭಾರತದಲ್ಲಿ ರಾಷ್ಟ್ರವ್ಯಾಪಿಯಾಗಿ SSF ನಡೆಸಿದ ಹಿಂದ್ ಸಫರ್ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಉತ್ತರ ಭಾರತದಾದ್ಯಂತ ಹೆಚ್ಚಿನ ಸಮಾಜಪರ ಚಟುವಟಿಕೆಗಳ ಅಗತ್ಯವಿದ್ದು ಇದರೊಂದಿಗೆ ಬಹುಜನರ ಎಲ್ಲಾ ರೀತಿಯ ಸಹಕಾರದ ಆವಶ್ಯಕತೆಯನ್ನು ಬೊಟ್ಟುಮಾಡಿದರು.

ಮುಖ್ಯ ಅತಿಥಿಗಳಾಗಿ ಆಸ್ಸಯ್ಯಿದ್ ಶರಫುದ್ದೀನ್ ಅಲ್ ಹಾದಿ ತಂಙಳ್ ಉದ್ಯಾವರ, ಹಾಫಿಝ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯುಸುಫ್ ಸಖಾಫಿ ಅಯ್ಯಂಗೇರಿ, ಅಬ್ದುಲ್ ಮುನೀರ್ ಮಾಗುಂಡಿ, ಮುಹಮ್ಮದ್ ಹನೀಫ್ ಪಾತೂರು, ಅಂದುಮಾಯಿ ನಾವುಂದ, ಅಬ್ದುರ್ರಹ್ಮಾನ್ ಪುಂಜಾಲಕಟ್ಟೆ ಮೊದಲಾದವರು ಭಾಗವಹಿಸಿದರು. ಇನ್ನೋರ್ವ ಅತಿಥಿ ಝಕರಿಯ್ಯಾ ಮಂಜೇಶ್ವರರವರು ಮಾತನಾಡಿ ಅರ್ಪಣಾ ಮನೋಭಾವದೊಂದಿಗೆ ನಡೆಸುವ ಸಂಘಟನಾ ಚಟುವಟಿಕೆಗಳಿಂದ ಸಮಾಜದಲ್ಲಿ ರಚನಾತ್ಮಕವಾದ ಕ್ರಾಂತಿಯನ್ನೇ ಸೃಷ್ಥಿ ಮಾಡಬಹುದೆಂದು ಹೇಳಿದರು.

ರಿಸಾಲ ಸ್ಟಡೀ ಸರ್ಕಲ್ ಗಲ್ಫ್ ಕೌನ್ಸಿಲ್ GCC ಮಟ್ಟದಲ್ಲಿ ನಡೆಸಿದ ಸಾಹಿತ್ಯೋತ್ಸವ್ ಕಾರ್ಯಕ್ರಮದಲ್ಲಿ ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದ ಸಾಬಿತ್ ಮುನೀರ್ ರವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಅಸ್ಸಯ್ಯಿದ್ ಶರಫುದ್ದೀನ್ ತಂಙಳ್ ಅವರು ನಡೆಸಿ, ದುಆ ನೇತೃತ್ವ ವಹಿಸಿದರು.

error: Content is protected !! Not allowed copy content from janadhvani.com