ಬೆಂಗಳೂರು: ಎಲ್ಲಾ ಜಿಲ್ಲೆಗಳಲ್ಲಿಯೂ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎನ್ನುವ ಉದ್ದೇಶದಿಂದ ಕುಮಾರಸ್ವಾಮಿ ತಮ್ಮ 2019–20ನೇ ಸಾಲಿನ ಬಜೆಟ್‌ನಲ್ಲಿ ಆಸ್ಪತ್ರೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಿದ್ದಾರೆ.
ತುಮಕೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು, ದೊಡ್ಡಬಳ್ಳಾಪುರದ ತಾಲ್ಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಸ್ಪತ್ರೆಯನ್ನಾಗಿಸುವುದು, ವಿಜಯಪುರದಲ್ಲಿ 100 ಹಾಸಿಗೆಗಳ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಪ್ರಾರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಯಿತು.
ಮಂಗನ ಕಾಯಿಲೆ ಚಿಕಿತ್ಸಾ ಘಟಕ
ಈ ವರ್ಷ ಮಲೆನಾಡಿನ ಸುತ್ತಮುತ್ತ ಜಿಲ್ಲೆಗಳ ಜನರಲ್ಲಿ ಆತಂಕ ಸೃಷ್ಟಿಸಿದ್ದ ಮಂಗನ ಕಾಯಿಲೆಯ ಚಿಕಿತ್ಸೆ ಬಗ್ಗೆ ಬಜೆಟ್‌ನಲ್ಲಿ ಗಮನಸೆಳೆದಿರುವ ಕುಮಾರಸ್ವಾಮಿ, ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯ ಸಂಶೋಧನಾ ಮತ್ತು ಚಿಕಿತ್ಸಾ ಘಟಕ ಆರಂಭಿಸುವುದಾಗಿ ಘೋಷಿಸಿದರು.
ಕ್ಷ–ಕಿರಣ ಸುರಕ್ಷತಾ ನಿರ್ದೇಶನಾಲಯ
ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಕ್ಷ–ಕಿರಣ ಕೇಂದ್ರಗಳ ಸುರಕ್ಷತೆಯನ್ನು ಅಟಾಮಿಕ್ ಎನರ್ಜಿ ರೀಸರ್ಚ್ ಬೋರ್ಡ್ ಮಾರ್ಗದರ್ಶನದಂತೆ ಮಾಡುವ ನಿಟ್ಟಿನಲ್ಲಿ ಕ್ಷ–ಕಿರಣ ಸುರಕ್ಷತಾ ನಿರ್ದೇಶನಾಲಯ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ.
ಆಶಾ ಕಾರ್ಯಕರ್ತೆಯರ ಗೌರವ ಧನ ಏರಿಕೆ
ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಆರೈಕೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಪದೇ ಪದೇ ಪ್ರತಿಭಟನೆ ಮಾಡಿದ ಪರಿಣಾಮ ಅವರಿಗೆ ನೀಡಲಾಗುತ್ತಿರುವ ಗೌರವ ಧನದಲ್ಲಿ ₹500 ಹೆಚ್ಚಳ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದರು. ಆದರೆ, ಇದು ಜಾರಿಯಾಗುವುದು ನವೆಂಬರ್ 1ರಿಂದ. ಸದ್ಯ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹3,500 ಗೌರವ ಧನವನ್ನು ಸರ್ಕಾರ ನೀಡುತ್ತಿದೆ. ಇದನ್ನು ₹6 ಸಾವಿರಕ್ಕೆ ಹೆಚ್ಚಿಸಿ ಎಂದು ಅವರು ಬೇಡಿಕೆ ಇಟ್ಟಿದ್ದರು.
10 ಜಿಲ್ಲೆಗಳಲ್ಲಿ ಸ್ತನ ಸ್ಕ್ಯಾನಿಂಗ್ ವ್ಯವಸ್ಥೆ
ಮಂಗಳೂರು, ತುಮಕೂರು, ಬಿಜಾಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಡಿಜಿಟಲ್ ಸ್ತನ ಸ್ಕ್ಯಾನಿಂಗ್ (ಮ್ಯಾಮೊಗ್ರಾಂ) ಹಾಗೂ ಪಿಎಪಿ (ಪ್ಯಾಪ್) ಪರೀಕ್ಷಾ ಕೇಂದ್ರ ಸ್ಥಾಪನೆ.
ವೈದ್ಯಕೀಯ ಶಿಕ್ಷಣ
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಾಣ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಆವರಣದಲ್ಲಿ 450 ಹಾಸಿಗೆಯ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು.
ಹುಬ್ಬಳ್ಳಿಯಲ್ಲಿ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ತೃತೀಯ ಹಂತದ ಕ್ಯಾನ್ಸರ್ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರದಿಂದ ₹4.8 ಕೋಟಿ ಸಹಾಯಧನ, ಕಲಬುರ್ಗಿಯಲ್ಲಿನ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ 300 ಹಾಸಿಗೆ ಸಾಮರ್ಥ್ಯ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ, ಎಸ್.ಡಿ.ಎಸ್.ಟಿ.ಬಿ. ಸಂಸ್ಥೆಯ ಆವರಣದಲ್ಲಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಕೆಮಿಕಲ್, ಬಯಲಾಜಿಕಲ್, ರೇಡಿಯೇಷನ್, ನ್ಯೂಕ್ಲಿಯರ್ ನ್ಯಾಚುರಲ್ ಡಿಸಾಸ್ಟರ್ ಕೇಂದ್ರ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಯಿತು.