janadhvani

Kannada Online News Paper

ಕಾಂಗ್ರೆಸ್ ಸರ್ಕಾರವು ಬಿಜೆಪಿಯಂತೆ ವರ್ತಿಸಿದರೆ ಮುಸ್ಲಿಮರ ಮತ ಯಾಚಿಸಲು ಸಾಧ್ಯವೇ?- ರೋಷನ್ ಬೇಗ್

ನವದೆಹಲಿ: ಗೋ ವಧೆ ಮಾಡುವವರ ವಿರುದ್ಧ ಕಾಂಗ್ರೆಸ್ ಸರ್ಕಾರ ಕೂಡ ಬಿಜೆಪಿಯಂತೆ ಕ್ರಮ ಕೈಗೊಂಡರೆ ಹೇಗೆ? ಮುಂದೆ ಅವರ ಬಳಿ ಹೋಗಿ ಮತ ಕೇಳುವುದಾದರೂ ಹೇಗೆ ಎಂದು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪ್ರತಿನಿಧಿಗಳು ಪಕ್ಷದ ಮುಖಂಡರನ್ನು ಪ್ರಶ್ನಿಸಿದ್ದಾರೆ.
ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಇಂದು ನಡೆದ ಎಐಸಿಸಿ ಅಲ್ಪಸಂಖ್ಯಾತದ ವಾರ್ಷಿಕ ಸಮಾವೇಶದಲ್ಲಿ ಕರ್ನಾಟಕದ ಅಲ್ಪಸಂಖ್ಯಾತ ವಿಭಾಗದ ಪ್ರತಿನಿಧಿ ಹಾಗೂ ಮಾಜಿ ಸಚಿವ ರೋಷನ್ ಬೇಗ್ ಮಾತನಾಡಿ, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಕಮಲನಾಥ್ ನೇತೃತ್ವದ ಸರ್ಕಾರ ಗೋ ವಧೆ ಮಾಡಿದ ಆರೋಪ ಮೇಲೆ ಮುಸ್ಲಿಮರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಮುಸ್ಲಿಮರ ವಿರುದ್ಧ ಕಾಂಗ್ರೆಸ್ ಸರ್ಕಾರ ಹೀಗೆ ನಡೆದುಕೊಂಡರೆ ನಾವು ಹೇಗೆ ಉತ್ತರಪ್ರದೇಶದ ಮುಸ್ಲಿಮರ ಮತ ಯಾಚಿಸಲು ಸಾಧ್ಯ ಎಂದು ಪ್ರಶ್ನಿಸಿದರು.ಇದಕ್ಕೆ ದನಿ ಗೂಡಿಸಿದ ಮಹಾರಾಷ್ಟ್ರದ ಮಾಜಿ ಸಚಿವ ಆರೀಫ್ ಖಾನ್ ಕೂಡ, ಕಾಂಗ್ರೆಸ್ ಸರ್ಕಾರ ಕೂಡ ಬಿಜೆಪಿಯವರಂತೆಯೇ ನಡೆದುಕೊಂಡರೆ ಹೇಗೆ? ನಾವು ಇದನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾರತ ಚಿನ್ನದ ಹಕ್ಕಿ ಎಂದು ಕರೆದಿದ್ದಾರೆ. ಅಂದರೆ ಇದರ ಅರ್ಥ ಇದೊಂದು ಉತ್ಪನ್ನ. ಈ ಚಿನ್ನದ ಹಕ್ಕಿಯಿಂದ ಒಬ್ಬರು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಅಮಿತ್ ಶಾ ವಿರುದ್ಧ ಹರಿಹಾಯ್ದರು.

error: Content is protected !! Not allowed copy content from janadhvani.com