janadhvani

Kannada Online News Paper

ಬೆಂಗಳೂರು, ಜ.24: ರಾಜ್ಯದಲ್ಲಿರುವ ಮುಸ್ಲಿಮ್ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಜ.27ರಂದು ಸಂಜೆ 4 ಗಂಟೆಗೆ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ‘ಕರ್ನಾಟಕ ಮುಸ್ಲಿಂ ಜಮಾಅತ್’ ಸಂಘಟನೆಯನ್ನು ಘೋಷಿಸಲಾಗುವುದು ಎಂದು ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎಸ್.ಎ.ಖಾದರ್ ತಿಳಿಸಿದರು.

ಗುರುವಾರ ನಗರದ ಬೌರಿಂಗ್ ಆಸ್ಪತ್ರೆ ರಸ್ತೆಯಲ್ಲಿರುವ ಫಿರೋಝ್ ವೈಟ್‌ಮ್ಯಾನರ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸಮಾವೇಶವನ್ನು ಉದ್ಘಾಟಿಸಲಿದ್ದು, ದೇಶದ ಪ್ರಮುಖ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.17ರಷ್ಟಿರುವ ಮುಸ್ಲಿಮರ ಶ್ರೇಯೋಭಿವೃದ್ಧಿಗಾಗಿ ರಾಜಕೀಯ ಪ್ರಾತಿನಿಧ್ಯ ಅಗತ್ಯ. ನಮ್ಮಲ್ಲಿರುವ ಸಂಘಟನೆಯ ಕೊರತೆಯಿಂದಾಗಿ ಪಂಚಾಯತ್ ಯಿಂದ ಸಂಸತ್ತಿನವರೆಗೆ ಪ್ರತಿಯೊಂದು ಚುನಾವಣೆಯಲ್ಲೂ ಮುಸ್ಲಿಮರ ಪ್ರಾತಿನಿಧ್ಯ ಗಣನೀಯವಾಗಿ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿರುವ ಲಿಂಗಾಯತ, ಒಕ್ಕಲಿಗ, ಕುರುಬ ಸಮುದಾಯದವರು ತಮ್ಮ ಸಂಘಟನೆಯಿಂದಾಗಿ ಸೂಕ್ತ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಸಂಘಟನೆಯು ಪ್ರಮುಖವಾಗಿ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ಶ್ರಮಿಸಲಾಗುವುದು ಎಂದು ಖಾದರ್ ತಿಳಿಸಿದರು.

ರಾಜ್ಯದಲ್ಲಿ ಶೇ.51ರಷ್ಟು ಮುಸ್ಲಿಮರು ಬಿಪಿಎಲ್ ಕುಟುಂಬದವರಿದ್ದಾರೆ. ಅನಕ್ಷರತೆಯ ಪ್ರಮಾಣವು ಹೆಚ್ಚಿದೆ. ಮುಂದಿನ 5-10 ವರ್ಷಗಳಲ್ಲಿ ಮನೆಗೊಬ್ಬ ಪದವೀಧರ ಇರಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ. ಈ ಗುರಿಯನ್ನು ಸಾಧಿಸಲು ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಮಾವೇಶದ ಸ್ವಾಗತ ಸಮಿತಿಯ ಸಂಚಾಲಕ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ನಮ್ಮ ಪ್ರತಿನಿಧಿಗಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯಾದ್ಯಂತ 10 ಲಕ್ಷ ಸದಸ್ಯರ ನೋಂದಣಿಯ ಗುರಿಯಿದೆ ಎಂದರು.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಹೊಂದಿರುವ ಮುಸ್ಲಿಮರಿಗೆ, ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶೇ.3ರಷ್ಟಿರುವ ಕ್ರೈಸ್ತರು ಹಾಗೂ ಬೌದ್ಧರಲ್ಲಿ ಶಿಕ್ಷಣದ ಪ್ರಮಾಣ ಶೇ.98. ಆದರೆ, 90 ಲಕ್ಷ ಜನಸಂಖ್ಯೆ ಹೊಂದಿರುವ ಮುಸ್ಲಿಮರಲ್ಲಿ ಶಿಕ್ಷಣದ ಪ್ರಮಾಣ ಶೇ.60ರಷ್ಟು ಮಾತ್ರ. ಉನ್ನತ ಶಿಕ್ಷಣ ವಿಭಾಗದಲ್ಲಿ ಇತರ ಹಿಂದುಳಿದ ವರ್ಗಗಳು ಶೇ.22ರಷ್ಟು ಪಾಲು ಹೊಂದಿದ್ದರೆ, ಮುಸ್ಲಿಮರ ಪ್ರಾತಿನಿಧ್ಯ ಕೇವಲ ಶೇ.13.8ರಷ್ಟು ಮಾತ್ರ ಎಂದು ಶಾಫಿ ಸಅದಿ ತಿಳಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ವಿಧಾನಸಭೆಯಲ್ಲಿ ನಮ್ಮ ಸಮುದಾಯದ 35 ರಿಂದ 40 ಶಾಸಕರು, 4 ರಿಂದ 5 ಮಂದಿ ಸಂಸದರು ಇರಬೇಕು. ಆದರೆ, ಹಾಲಿ ವಿಧಾನಸಭೆಯಲ್ಲಿ ಇರುವ ನಮ್ಮ ಸಮುದಾಯದ ಶಾಸಕರ ಸಂಖ್ಯೆ ಕೇವಲ 7 ಮಾತ್ರ. ಲೋಕಸಭಾ ಸದಸ್ಯರ ಪೈಕಿ ಒಬ್ಬರು ಇಲ್ಲ ಎಂದು ಅವರು ಹೇಳಿದರು. 59 ಲಕ್ಷ ಜನಸಂಖ್ಯೆ ಇರುವ ಲಿಂಗಾಯತರಲ್ಲಿ 58 ಮಂದಿ, ಒಕ್ಕಲಿಗ ಸಮುದಾಯದ 42 ಮಂದಿ, ಶೇ.3ರಷ್ಟಿರುವ ಬ್ರಾಹ್ಮಣರಲ್ಲಿ 14 ಶಾಸಕರು, 29 ಲಕ್ಷ ಜನಸಂಖ್ಯೆ ಇರುವ ಕುರುಬರಲ್ಲಿ 13 ಶಾಸಕರಿದ್ದಾರೆ. ನಮ್ಮ ಸಮುದಾಯದವರು ಇತರರಂತೆ ಜಾಗೃತರಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಮೌಲಾನ ಹುಸೈನ್ ಮಿಸ್ಬಾಹಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com