ಇಸ್ಲಾಂ ಮತ್ತು ಕಾರ್ಮಿಕರ ಘನತೆ
ಮೇ ಒಂದನೇ ತಾರೀಖು ಬಂತೆಂದರೆ ಸಾಕು, ಜಗತ್ತಿನಾದ್ಯಂತ ‘ಮೇ ಡೇ’ ಅಂತ ಕೂಗಾಡುತ್ತಾರೆ. ಕಾರ್ಮಿಕರ ಬೆವರಿನ ಹನಿಗಳಿಗೆ ಗೌರವ ಕೊಡುತ್ತೇವೆ ಅಂತ ಬೀದಿಗೆ ಇಳಿಯುತ್ತಾರೆ. ದೇಶದ ಏಳಿಗೆಗೆ ಕಾರ್ಮಿಕನೇ ಬೆನ್ನೆಲುಬು ಅಂತ ಭಾಷಣ ಬಿಗಿಯುತ್ತಾರೆ. ಭಾರತದಿಂದ ಹಿಡಿದು ಅಮೆರಿಕದವರೆಗೆ ಇದೇ ಕಥೆ.
ಆದರೆ ನನ್ನದೊಂದು ಪ್ರಶ್ನೆ… ಈ ಅಬ್ಬರದ ಮೆರವಣಿಗೆಗಳು, ನಾಲ್ಕಾರು ಚೆಕ್ ಹಂಚುವ ನಾಟಕಗಳು, ವೇದಿಕೆಯ ಮೇಲೆ ಸುರಿಸುವ ಸುಳ್ಳು ಕಣ್ಣೀರು—ಇವೆಲ್ಲ ಮುಗಿದ ಮೇಲೆ ಆ ಬಡ ಕಾರ್ಮಿಕನ ಬದುಕಲ್ಲಿ ಬದಲಾವಣೆ ಏನು?
ಬದುಕಿನ ಕಹಿಸತ್ಯ...
ನೋಡಿ, ಅದೇ ಮೇ ಒಂದನೇ ತಾರೀಖು ಮಧ್ಯಾಹ್ನ ಬಿಸಿಲಲ್ಲಿ ರಸ್ತೆ ಬದಿಯ ದಿನಗೂಲಿಗಳು ರಾತ್ರಿಯ ಗಂಜಿಗೆ ಗತಿಯಿಲ್ಲದೆ ಬೆವರು ಸುರಿಸುತ್ತಿರುತ್ತಾರೆ. ಮನೆಗೆಲಸದ ಹೆಣ್ಣುಮಗಳು ಒಂದು ದಿನ ರಜೆ ಕೇಳಿದರೆ ಸಾಕು, ಆ ಮನೆಯ ‘ಬೇಗಂ ಸಾಹೇಬರು’ ಅವಳ ಮೇಲೆ ರೇಗಾಡುತ್ತಾರೆ. ಇನ್ನು ಈ ವೈಟ್ ಕಾಲರ್ ಉದ್ಯೋಗಿಗಳಿದ್ದಾರಲ್ಲ?
ಏಪ್ರಿಲ್ 30ರ ರಾತ್ರಿ ಬಾಸ್ ಕೊಟ್ಟ ಪ್ರೆಷರ್ಗೆ ಹೆದರಿ ಸಂಬಳ ಕಟ್ ಆಗದಿರಲೆಂದು ರಜೆಯ ದಿನವೂ ಕದ್ದುಮುಚ್ಚಿ ಆಫೀಸ್ ಗೆ ಹೋಗಿ ಫೈಲುಗಳನ್ನು ಗುದ್ದುತ್ತಿರುತ್ತಾರೆ. ನ್ಯಾಯ ಅನ್ನೋದು ಬರೀ ಮೇಲ್ಪದರದ ಅಧಿಕಾರಿಗಳಿಗೆ ಮಾತ್ರ ಮೀಸಲಾಗಿಬಿಟ್ಟಿದೆ.
* ಇತಿಹಾಸದ ಆ ಪುಟಗಳನ್ನು ತಿರುವಿ ನೋಡಿ…
ಇಸ್ಲಾಂ ಉದಯವಾದಾಗ ಅದು ತಂದ ಅತಿದೊಡ್ಡ ಕ್ರಾಂತಿ ಎಂದರೆ ಕಾರ್ಮಿಕನ ಘನತೆ. ಅಂದು ಅರಬ್ಬರ ಜಗತ್ತಿನಲ್ಲಿ ಗುಲಾಮರಾಗಿದ್ದ ಬಿಲಾಲ್ (ರ) ಮತ್ತು ಮಕ್ಕಾದ ಕುಲೀನ ಅಬ್ದುಲ್ಲಾ ಇಬ್ನ್ ಉಬಯ್—ಇಬ್ಬರಿಗೂ ಇಸ್ಲಾಂ ಸಮಾನ ಗೌರವ ನೀಡಿತು. ಇಸ್ಲಾಂ ಕಾರ್ಮಿಕರಿಗೆ ‘ರಜೆ’ ಘೋಷಣೆ ಮಾಡಲಿಲ್ಲ, ಬದಲಿಗೆ ಕೆಲಸಗಾರನ ಹಕ್ಕುಗಳನ್ನು ಗೌರವಿಸುವ ‘ಜೀವನ ಪದ್ಧತಿ’ಯನ್ನೇ ಜಾರಿಗೆ ತಂದಿತು. ಅಲ್ಲಾಹನು ಇದನ್ನು ಮುಸ್ಲಿಮರಿಗೆ ಒಂದು ಆಯ್ಕೆಯಾಗಿ ಕೊಡಲಿಲ್ಲ. ಬದಲಿಗೆ ಅಪ್ಪಣೆಯಾಗಿ ನೀಡಿದ. ನಮ್ಮ ಸೇವೆ ಮಾಡುವವರ ಜಾತಿ, ಧರ್ಮ ಯಾವುದಾದರೂ ಇರಲಿ, ಅವರಿಗೆ ಗೌರವ ಕೊಡಲೇಬೇಕು ಎಂಬುದು ದೈವವಾಣಿ.
ಗುಲಾಮಗಿರಿಯೋ ಅಥವಾ ಮಾನವೀಯತೆಯೋ?
ಇವತ್ತಿನ ಜಗತ್ತಿನಲ್ಲಿ ಗುಲಾಮಗಿರಿಯನ್ನ ನಾವು ಹೀನಾಯವಾಗಿ ಕಾಣುತ್ತೇವೆ. ಆದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಕಾಲದಲ್ಲಿದ್ದ ಗುಲಾಮರಿಗೆ ಸಿಗುತ್ತಿದ್ದ ಗೌರವ, ಇವತ್ತಿನ ನಮ್ಮ ಮನೆಯ ಕೆಲಸದವರಿಗೆ ಅಥವಾ ಫ್ಯಾಕ್ಟರಿ ಕಾರ್ಮಿಕರಿಗೆ ಸಿಗುತ್ತಿದೆಯೇ? ಯೋಚನೆ ಮಾಡಿ. ಅಂದು ಪ್ರವಾದಿಯವರು ಸ್ವತಂತ್ರ ವ್ಯಕ್ತಿಯನ್ನು ಗುಲಾಮನನ್ನಾಗಿ ಮಾಡುವುದನ್ನು ನಿಷೇಧಿಸಿದ್ದರು. ಯುದ್ಧ ಕೈದಿಗಳನ್ನು ಮಾತ್ರ ಗುಲಾಮರನ್ನಾಗಿ ಇಟ್ಟುಕೊಳ್ಳುವ ಸಂಪ್ರದಾಯವಿತ್ತು. ಆದರೆ ಅವರಿಗೂ ಸಂಕೋಲೆ ಇರಲಿಲ್ಲ, ಸೆರೆಮನೆ ಇರಲಿಲ್ಲ. ಸಮಾಜದಲ್ಲಿ ಬೆರೆಯುವ ಸ್ವಾತಂತ್ರ್ಯವಿತ್ತು.
ಪವಿತ್ರ ಕುರ್ ಆನ್ ಹೇಳುವುದೇನು?
ಕಷ್ಟದಲ್ಲಿರುವವರ ಕುತ್ತಿಗೆಯನ್ನು ಬಿಡಿಸುವುದು (ಗುಲಾಮಗಿರಿಯಿಂದ ಮುಕ್ತಗೊಳಿಸುವುದು) ಸ್ವರ್ಗದ ಹಾದಿ ಎಂದು ಕುರ್ ಆನ್ ಸಾರಿತು. ಅಬೂಬಕರ್ (ರ), ಉಸ್ಮಾನ್ (ರ) ಅಂತಹ ಮಹನೀಯರು ಹಲವಾರು ಗುಲಾಮರನ್ನು ಹಣ ಕೊಟ್ಟು ಬಿಡಿಸಿ ಸ್ವತಂತ್ರಗೊಳಿಸಿದರು. ಪ್ರವಾದಿಯವರು ಹೇಳಿದರು—”ಯಾರು ಒಬ್ಬ ಮುಸ್ಲಿಂ ಗುಲಾಮನನ್ನು ಬಿಡುಗಡೆ ಮಾಡುತ್ತಾರೋ, ಅವರ ಪ್ರತಿಯೊಂದು ಅಂಗವನ್ನೂ ಅಲ್ಲಾಹನು ನರಕದ ಬೆಂಕಿಯಿಂದ ಉಳಿಸುತ್ತಾನೆ.” ಇವತ್ತಿನ ಕಾಲದಲ್ಲಿ ಕಾರ್ಮಿಕರನ್ನು ಸಾಲದ ಸುಳಿಯಿಂದ ಮುಕ್ತಗೊಳಿಸುವುದು ಪುಣ್ಯದ ಕೆಲಸವೆಂದು ನಾವೆಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇವೆ
ಕೆಲವು ಮನಮಿಡಿಯುವ ಘಟನೆಗಳು:
ಅನಸ್ ಇಬ್ನ್ ಮಾಲಿಕ್ (ರ) ಹೇಳುತ್ತಾರೆ: “ನಾನು ಹತ್ತು ವರ್ಷ ಪ್ರವಾದಿಯವರ ಸೇವೆ ಮಾಡಿದೆ. ಆ ಹತ್ತು ವರ್ಷದಲ್ಲಿ ಅವರು ಒಮ್ಮೆಯೂ ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ ಅಥವಾ ‘ಯಾಕೆ ಹೀಗೆ ಮಾಡಿದೆ?’ ಎಂದು ಗದರಲಿಲ್ಲ.
ಒಮ್ಮೆ ಅಬೂ ಮಸೂದ್ ತನ್ನ ಗುಲಾಮನನ್ನು ಹೊಡೆಯುತ್ತಿದ್ದಾಗ, ಹಿಂದಿನಿಂದ ಪ್ರವಾದಿಯವರ ಧ್ವನಿ ಕೇಳಿಸಿತು—”ಅಬೂ ಮಸೂದ್, ನೆನಪಿಡು, ನಿನಗೆ ಆ ಗುಲಾಮನ ಮೇಲೆ ಎಷ್ಟು ಅಧಿಕಾರವಿದೆಯೋ, ಅದಕ್ಕಿಂತ ಹೆಚ್ಚು ಅಧಿಕಾರ ಅಲ್ಲಾಹನಿಗೆ ನಿನ್ನ ಮೇಲಿದೆ.
ನಿಮ್ಮ ಕೆಲಸಗಾರ ಊಟ ತಯಾರಿಸಿ ತಂದಾಗ, ಆತನನ್ನು ನಿಮ್ಮ ಜೊತೆ ಕುಳಿತು ತಿನ್ನಲು ಹೇಳಿ. ಇಲ್ಲದಿದ್ದರೆ ಕನಿಷ್ಠ ಒಂದು ತುತ್ತಾದರೂ ಆತನಿಗೆ ನೀಡಿ, ಏಕೆಂದರೆ ಆತ ಬೆಂಕಿಯ ಮುಂದೆ ನಿಂತು ಆ ಊಟ ತಯಾರಿಸಿದ್ದಾನೆ.” ಇದಕ್ಕಿಂತ ದೊಡ್ಡ ಮಾನವೀಯತೆ ಬೇಕೇ?
ಉಮರ್ (ರ) ಜೆರುಸಲೆಮ್ ಗೆ ಹೋದ ಯಾತ್ರೆಯಲ್ಲಿ ಅವರ ಕೆಲಸಗಾರೊಂದಿಗೆ ಒಂಟೆಯ ಮೇಲೆ ಸರದಿಯ ಪ್ರಕಾರ ಕುಳಿತುಕೊಳ್ಳುತ್ತಿದ್ದರು. ಇಂತಿಷ್ಟು ಸಮಯ ಉಮರ್ (ರ) ಮತ್ತು ಇಂತಿಷ್ಟು ಸಮಯ ತನ್ನ ಕೆಲಸಗಾರ ಒಂಟೆಯ ಮೇಲೆ ಕುಳಿತು ಪ್ರಯಾಣವನ್ನು ಮುಂದುವರಿಸಿದರು ಹೀಗೆ ಜೆರೂಸಲಮ್ ನಗರವನ್ನು ಪ್ರವೇಶಿಸುವಾಗ ಕೆಲಸಗಾರ ಒಂಟೆಯ ಮೇಲಿದ್ದ, ಚಕ್ರವರ್ತಿ ಉಮರ್ ಒಂಟೆಯ ಹಗ್ಗ ಹಿಡಿದು ನಡೆಸುತ್ತಿದ್ದರು! ಇಂತಹ ಇತಿಹಾಸ ನಮ್ಮದು.
ಆದರೆ ಇವತ್ತು? ಕೆಲಸದವರ ಮೇಲೆ, ಸಣ್ಣ ತಪ್ಪುಗಳಿಗೂ ಗದರಿಸುವುದು, ಏನದರೂ ವಸ್ತು ಕಾಣೆಯಾದ ತಕ್ಷಣ ಅವರನ್ನೇ ಕಳ್ಳರೆಂದು ಸಂಶಯಿಸುವುದು, ಅವರಿಗೆ ಬೇರೆ ತಟ್ಟೆಯಲ್ಲಿ ಊಟ ಹಾಕುವುದು, ಹಳಸಿದ ಆಹಾರ ಕೊಡುವುದು, ಹೆಚ್ಚು ತಾಸುಗಳ ಕಾಲ ಮಿತಿಮೀರಿ ಕೆಲಸ ಮಾಡಿಸುವುದು—ಇವು ನಮ್ಮ ಸಂಸ್ಕೃತಿಯಾಗಿಬಿಟ್ಟಿದೆ.
ನೆನಪಿರಲಿ, ಅಲ್ಲಾಹನು ಎಲ್ಲವನ್ನೂ ನೋಡುತ್ತಿದ್ದಾನೆ. ಸೃಷ್ಟಿಕರ್ತನಿಗೆ ತನ್ನ ಸೃಷ್ಟಿಯ ಮೇಲಾಗುವ ಅನ್ಯಾಯ ಕಂಡರೆ ಎಂದಿಗೂ ಸಹಿಸುವುದಿಲ್ಲ. ಒಂದು ರಜೆಯಿಂದ ಕಾರ್ಮಿಕರ ಬದುಕು ಬದಲಾಗುವುದಿಲ್ಲ, ನಮ್ಮ ಮನಸ್ಥಿತಿ ಬದಲಾಗಬೇಕು.
✍️ ಡಿ.ಪಿ ಯೂಸುಫ್ ಸಖಾಫಿ ಬೈತಾರ್















ಇನ್ನಷ್ಟು ಸುದ್ದಿಗಳು
ಅನಿವಾಸಿಗಳಿಗಾಗಿ ಜಾಗೃತಿ ಸಂದೇಶ: “ಸಂಯಮವೇ ಸುಕ್ಷೇಮ”-ಕ್ಷಣಿಕ ಕೋಪಕ್ಕೆ ಬಲಿಯಾಗಬೇಡಿ
ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ
ಅಲ್ಲಾ ಸ್ವಾಮಿ, ಯುದ್ಧಕ್ಕೆ ಯಾಕೆ ಹುಲ್ಲು?” ಡಿ.ಪಿ ಬೈತಾರ್
ಶಾಂತಿ ಮತ್ತು ಸಹಬಾಳ್ವೆಯ ‘ಈದ್ ಉಲ್ ಫಿತರ್’ ವಿಶೇಷ ಸಂದೇಶ
ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?
ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ….!!!
ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ
ಮುಅಲ್ಲಿಮ್ ವಿಭಾಗದ ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ