ಬೈರೂತ್: ಲೆಬನಾನ್‌ನಲ್ಲಿ ಯುದ್ಧ ಆರಂಭವಾದ ನಂತರ ಇಸ್ರೇಲ್ ಬುಧವಾರ ಅತ್ಯಂತ ಕಠಿಣ ಮತ್ತು ವಿನಾಶಕಾರಿ ದಾಳಿಯನ್ನು ನಡೆಸಿದೆ. ಕೇವಲ 10 ನಿಮಿಷಗಳ ಅಂತರದಲ್ಲಿ ದೇಶದಾದ್ಯಂತ ನೂರಕ್ಕೂ ಹೆಚ್ಚು ಗುರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಯುದ್ಧವಿಮಾನಗಳು ಬಾಂಬ್ ಸುರಿಸಿವೆ. ಈ ದಿಢೀರ್ ದಾಳಿಯಿಂದಾಗಿ ಲೆಬನಾನ್ ಅಕ್ಷರಶಃ ನಲುಗಿಹೋಗಿದೆ.
ಬುಧವಾರ ಮಧ್ಯಾಹ್ನ ಜನನಿಬಿಡ ಬೈರೂತ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ನೀಡದೆ ದಾಳಿ ನಡೆಸಲಾಗಿದೆ. ಕೇವಲ 10 ನಿಮಿಷಗಳಲ್ಲಿ 100 ಸ್ಥಳಗಳನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಸೇನಾ ವಕ್ತಾರ ಅವಿಚಾಯ್ ಅದ್ರಾಯಿ ಖಚಿತಪಡಿಸಿದ್ದಾರೆ.
ದಾಳಿಯಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆಯಿದ್ದು, ಮರಣ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.
ಹಿಜ್ಬುಲ್ಲಾ ನಾಯಕರ ಮೇಲೆ ಕಣ್ಣು: ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಾಧ್ಯಮ ‘ಚಾನೆಲ್ 12’ ವರದಿ ಮಾಡಿದೆ. ದಾಳಿಯಲ್ಲಿ ಹಿಜ್ಬುಲ್ಲಾ ಆಪ್ತ, ಪ್ರಮುಖ ರಾಜಕೀಯ ವಿಶ್ಲೇಷಕ ಪ್ರೊಫೆಸರ್ ಸಾದಿಕ್ ಅಲ್ ನಬುಲ್ಸಿ ಮೃತಪಟ್ಟಿರುವುದನ್ನು ಹಿಜ್ಬುಲ್ಲಾ ಖಚಿತಪಡಿಸಿದೆ.
ಕೇಂದ್ರ ಬೈರೂತ್ ಮತ್ತು ಪಶ್ಚಿಮ ಬೈರೂತ್‌ನ ವಾಣಿಜ್ಯ ಕೇಂದ್ರಗಳು ಹಾಗೂ ವಸತಿ ಸಂಕೀರ್ಣಗಳ ಮೇಲೆ ಬಾಂಬ್‌ಗಳು ಬಿದ್ದಿವೆ. ದಕ್ಷಿಣ ಲೆಬನಾನ್, ಬೆಕ್ಕಾ ಕಣಿವೆ ಮತ್ತು ಅಲೆ ಜಿಲ್ಲೆಯ ಹಲವು ವಸತಿ ಬ್ಲಾಕ್‌ಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಸಾವಿರಾರು ನಿರಾಶ್ರಿತರು ಆಶ್ರಯ ಪಡೆದಿದ್ದ ಪ್ರದೇಶಗಳ ಮೇಲೆ ದಾಳಿ ನಡೆದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ:
ಗಾಯಾಳುಗಳಿಂದಾಗಿ ಲೆಬನಾನ್‌ನ ಆಸ್ಪತ್ರೆಗಳು ತುಂಬಿಹೋಗಿವೆ. ತುರ್ತಾಗಿ ರಕ್ತದಾನ ಮಾಡುವಂತೆ ಆರೋಗ್ಯ ಸಚಿವಾಲಯವು ಜನರಲ್ಲಿ ಮನವಿ ಮಾಡಿದೆ. ಲೆಬನಾನಿನ ರೆಡ್ ಕ್ರಾಸ್ ತಂಡಗಳು ಅವಶೇಷಗಳ ನಡುವೆ ಸಿಲುಕಿದವರಿಗಾಗಿ ಹುಡುಕಾಟ ನಡೆಸುತ್ತಿವೆ.
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿರುವುದು ಗಮನಾರ್ಹ. ಈ ಕದನ ವಿರಾಮವು ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂಬ ನಿಲುವನ್ನು ಇಸ್ರೇಲ್ ಹೊಂದಿದೆ. ಇದರಿಂದಾಗಿ ಸ್ವಗ್ರಾಮಗಳಿಗೆ ಮರಳಲು ಸಿದ್ಧರಾಗಿದ್ದ ಲಕ್ಷಾಂತರ ನಿರಾಶ್ರಿತರು ಮತ್ತೆ ಬೀದಿಗೆ ಬೀಳುವಂತಾಗಿದೆ.
ಮಾರ್ಚ್ 2 ರಿಂದ ಪ್ರಾರಂಭವಾದ ಈ ಯುದ್ಧದಲ್ಲಿ ಇದುವರೆಗೆ 1,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 10 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಪ್ರಯತ್ನಗಳು ನಡೆಯುತ್ತಿದ್ದರೂ, ದಾಳಿಗಳು ಮುಂದುವರಿಯುತ್ತಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.















ಇನ್ನಷ್ಟು ಸುದ್ದಿಗಳು
ಲೆಬನಾನ್ ಮೇಲಿನ ಆಕ್ರಮಣ ನಿಲ್ಲಿಸಿ, ಇಲ್ಲದಿದ್ದರೆ ಕದನ ವಿರಾಮವಿಲ್ಲ: ಇರಾನ್ ಖಡಕ್ ಎಚ್ಚರಿಕೆ
ಇರಾನ್ ವಿನಾಶವೆಂದ ಟ್ರಂಪ್: ಭಾರತೀಯ ಮಾಧ್ಯಮಗಳಿಂದ ‘ಕೌಂಟ್ಡೌನ್’ ಸಂಭ್ರಮ- ಸಾರ್ವಜನಿಕ ಆಕ್ರೋಶ
‘ನಮ್ಮ ಕೈಗಳು ಸದಾ ಸನ್ನದ್ಧ, ಒಪ್ಪಂದ ಮೀರಿದರೆ ತಕ್ಕ ಪ್ರತ್ಯುತ್ತರ’ – 10 ಅಂಶಗಳ ಪ್ರಸ್ತಾವನೆ ಮುಂದಿಟ್ಟ ಇರಾನ್
ಅಮೆರಿಕ-ಇರಾನ್ ಸಂಘರ್ಷ ಶಮನ: ಚೀನಾದ ರಾಜತಾಂತ್ರಿಕತೆಗೆ ಸಂದ ಜಯ
ಚೀನಾ, ರಷ್ಯಾದಿಂದ ‘ವೀಟೋ’ ಚಲಾವಣೆ- ಹೋರ್ಮುಜ್ ಜಲಸಂಧಿ ತೆರೆಯುವ ಯುಎನ್ ನಿರ್ಣಯಕ್ಕೆ ಸೋಲು
‘ಟ್ರಂಪ್ ಆಸ್ಪತ್ರೆಯಲ್ಲೋ, ಮೃತಪಟ್ಟರೋ?’- ರೀಲ್ಸ್ ಮತ್ತು ಪೋಸ್ಟ್ಗಳು ವ್ಯಾಪಕ
ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಇರಾನ್- ಪೈಲಟ್ಗಳಿಗಾಗಿ ಶೋಧ ಮುಂದುವರಿಕೆ
‘ಅಮೆರಿಕದ ಸಾಮಾನ್ಯ ಜನತೆ ನಮ್ಮ ಶತ್ರುಗಳಲ್ಲ’ – ಅಮೆರಿಕನ್ನರಿಗೆ ಇರಾನ್ ಅಧ್ಯಕ್ಷರಿಂದ ಬಹಿರಂಗ ಪತ್ರ
ಟ್ರಂಪ್ ಸ್ಫೋಟಕ ಹೇಳಿಕೆ: ‘ಇರಾನ್ನಿಂದ ಕದನ ವಿರಾಮಕ್ಕೆ ಮನವಿ, ಹೊಸ ಅಧ್ಯಕ್ಷರು ಹೆಚ್ಚು ಬುದ್ಧಿವಂತರು’
ಕೊರೋನಾ ಹೊಸ ರೂಪಾಂತರಿ ‘ಸಿಕಾಡ’ (BA.3.2) ಭೀತಿ- 23ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪನ