janadhvani

Kannada Online News Paper

ವಿಶೇಷ ವರದಿ: ಅನಿವಾಸಿ ಕನ್ನಡಿಗರ ಬದುಕು – ಆಡಂಬರದ ಆಕರ್ಷಣೆಗಿಂತ ಭವಿಷ್ಯದ ಭದ್ರತೆ ಮುಖ್ಯ

ಅನೇಕ ಅನಿವಾಸಿಗಳು ತಮಗೇ ಕಷ್ಟವಿದ್ದರೂ ಇತರರ ಸಹಾಯಕ್ಕೆ ಧಾವಿಸುತ್ತಾರೆ. ಹೊರಗಿನಿಂದ ನೋಡಲು ಅದ್ದೂರಿ ಬಂಗಲೆಗಳಿದ್ದರೂ, ಅದರ ಹಿಂದೆ ಬ್ಯಾಂಕ್ ಸಾಲದ ಸುಳಿ ಮತ್ತು ಖಾಲಿಯಾದ ಬ್ಯಾಂಕ್ ಬ್ಯಾಲೆನ್ಸ್ ಇರುತ್ತದೆ ಎಂಬುದು ಯಾರಿಗೂ ತಿಳಿಯದ ಕಹಿ ಸತ್ಯ.

ಪ್ರೀತಿಯ ಅನಿವಾಸಿ ಕನ್ನಡಿಗರೇ,
ಗಲ್ಫ್ ರಾಷ್ಟ್ರಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ನೀವು, ನಿಮ್ಮ ನಿವೃತ್ತ ಜೀವನದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ನಿಮ್ಮ ದುಡಿಮೆಯ ಒಂದು ಭಾಗವನ್ನು ಬ್ಯಾಂಕ್ ಉಳಿತಾಯ ಅಥವಾ ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನೆನಪಿಡಿ, ವಿದೇಶದಿಂದ ಊರಿಗೆ ಮರಳಿದ ನಂತರ ಯಾರ ಮುಂದೆಯೂ ಕೈಚಾಚದೆ, ಸ್ವಾಭಿಮಾನದಿಂದ ಬದುಕಲು ಇಂದಿನ ಉಳಿತಾಯವೊಂದೇ ದಾರಿ

ತೆರೆಯ ಮರೆಯ ಕಷ್ಟಗಳು, ಕೋವಿಡ್ ಸಮಯದ ಬಿಕ್ಕಟ್ಟು ಹಾಗೂ ಈಗಿನ ಯುದ್ಧದ ಭೀತಿ ನಮಗೆ ದೊಡ್ಡ ಪಾಠ ಕಲಿಸಿದೆ. ವಿಮಾನಯಾನ ಸ್ಥಗಿತಗೊಂಡು ಊರಿನಲ್ಲಿ ಸಿಲುಕಿದ ಎಷ್ಟೋ ಅನಿವಾಸಿ ಕುಟುಂಬಗಳು ಆರ್ಥಿಕವಾಗಿ ಹೈರಾಣಾದವು. ಸಮಾಜದಲ್ಲಿ ಒಂದು ತಪ್ಪಾದ ಕಲ್ಪನೆಯಿದೆ— “ಗಲ್ಫ್‌ನಲ್ಲಿದ್ದಾರೆ ಎಂದರೆ ಅವರ ಬಳಿ ಹಣದ ಮಳೆಯಾಗುತ್ತಿದೆ” ಎಂದು. ದಾನಧರ್ಮ ಮಾಡುವವರು ಊರಿನ ಬಡವರನ್ನು ಗುರುತಿಸುತ್ತಾರೆಯೇ ಹೊರತು, ಕೆಲಸ ಕಳೆದುಕೊಂಡು ಅಥವಾ ಸಂಬಳವಿಲ್ಲದೆ ಒದ್ದಾಡುತ್ತಿರುವ ಅನಿವಾಸಿಗಳ ಕಣ್ಣೀರನ್ನು ಯಾರೂ ಗಮನಿಸುತ್ತಿಲ್ಲ.

ಅನೇಕ ಅನಿವಾಸಿಗಳು ತಮಗೇ ಕಷ್ಟವಿದ್ದರೂ ಇತರರ ಸಹಾಯಕ್ಕೆ ಧಾವಿಸುತ್ತಾರೆ. ಹೊರಗಿನಿಂದ ನೋಡಲು ಅದ್ದೂರಿ ಬಂಗಲೆಗಳಿದ್ದರೂ, ಅದರ ಹಿಂದೆ ಬ್ಯಾಂಕ್ ಸಾಲದ ಸುಳಿ ಮತ್ತು ಖಾಲಿಯಾದ ಬ್ಯಾಂಕ್ ಬ್ಯಾಲೆನ್ಸ್ ಇರುತ್ತದೆ ಎಂಬುದು ಯಾರಿಗೂ ತಿಳಿಯದ ಕಹಿ ಸತ್ಯ.

ನಮ್ಮ ಭವಿಷ್ಯ ನಮ್ಮ ಕೈಯಲ್ಲಿ: ಕೆಲವು ಪ್ರಮುಖ ಸಲಹೆಗಳು

  • “ಹಾಸಿಗೆ ಇದ್ದಷ್ಟೇ ಕಾಲು ಚಾಚು” ಎಂಬ ಗಾದೆಯಂತೆ, ನಿಮ್ಮ ಆದಾಯಕ್ಕೆ ತಕ್ಕಂತೆ ಮನೆಯನ್ನು ನಿರ್ಮಿಸಿ. ಅನಗತ್ಯ ಆಡಂಬರಕ್ಕಾಗಿ ಸಾಲದ ಸುಳಿಗೆ ಸಿಲುಕಬೇಡಿ.
  • ಕನಿಷ್ಠ 6 ತಿಂಗಳ ಮನೆ ಖರ್ಚಿಗೆ ಆಗುವಷ್ಟು ಹಣವನ್ನು ಯಾವಾಗಲೂ ಮೀಸಲಿಡಿ. ಕೆಲಸಕ್ಕೆ ತೊಂದರೆಯಾದಾಗ ಇದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ.
  • ಗಲ್ಫ್‌ನಲ್ಲಿರುವಾಗ ಕಂಪನಿಯ ವಿಮೆ ಇರುತ್ತದೆ. ಆದರೆ, ಊರಿನಲ್ಲಿರುವ ನಿಮ್ಮ ಕುಟುಂಬಕ್ಕೆ ಮತ್ತು ನೀವು ಕಾಯಂ ಆಗಿ ಊರಿಗೆ ಮರಳಿದಾಗ ಉಪಯುಕ್ತವಾಗುವಂತೆ ಪ್ರತ್ಯೇಕ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಿ.
  • ಪ್ರತಿ ಊರಿನಲ್ಲೂ ಅನಿವಾಸಿಗಳ ಕಷ್ಟ-ಸುಖಗಳಿಗೆ ಸ್ಪಂದಿಸುವ ಸಂಘಟನೆಗಳು ಬೇಕು.
  • ಸಂಕಷ್ಟದಲ್ಲಿರುವ ಅನಿವಾಸಿ ಕುಟುಂಬಗಳಿಗೆ ಆಹಾರದ ಕಿಟ್, ವೈದ್ಯಕೀಯ ನೆರವು ಮತ್ತು ಉದ್ಯೋಗ ಕಳೆದುಕೊಂಡವರಿಗೆ ಮಾರ್ಗದರ್ಶನ ನೀಡುವ ಕೆಲಸ ಸಕ್ರಿಯವಾಗಿ ನಡೆಯಬೇಕಿದೆ.
  • ಗಲ್ಫ್‌ನಲ್ಲಿರುವಾಗಲೇ ಬಿಡುವಿನ ಸಮಯದಲ್ಲಿ ಹೊಸ ತಂತ್ರಜ್ಞಾನ ಅಥವಾ ಸಣ್ಣ ವ್ಯಾಪಾರಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳಿ. ಇದು ಊರಿಗೆ ಮರಳಿದಾಗ ಸ್ವಂತ ಉದ್ಯೋಗ ಮಾಡಲು ಸಹಕಾರಿಯಾಗುತ್ತದೆ.
  • ಪ್ರತಿ ತಿಂಗಳ ಸಂಬಳದ ನಿರ್ದಿಷ್ಟ ಶೇಕಡಾವಾರು ಹಣವನ್ನು ಕಡ್ಡಾಯವಾಗಿ ಉಳಿತಾಯ ಖಾತೆಗೆ ಅಥವಾ ಹೂಡಿಕೆಗೆ ಮೀಸಲಿಡಿ.
  • ಊರಿಗೆ ರಜೆಗೆ ಹೋದಾಗ ಅನಗತ್ಯ ಶಾಪಿಂಗ್, ಅದ್ದೂರಿ ಮದುವೆ ಹಾಗೂ ಇತ್ತೀಚೆಗೆ ಶುರುವಾಗಿರುವ ಹೊಸ ಮಾದರಿಯ ದುಬಾರಿ ಸಮಾರಂಭಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿ ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಿ.
  • ಆದಾಯವಿಲ್ಲದಿದ್ದರೂ ಲೋನ್ ಮೂಲಕ ಕಾರು ಖರೀದಿಸಿ, ಇಂಧನ ತುಂಬಿಸಲು ಕಷ್ಟಪಟ್ಟು ಟೆನ್ಷನ್ ಮಾಡಿಕೊಳ್ಳುವ ಬದಲು ಬಸ್ ಅಥವಾ ಆಟೋ ಬಳಸುವುದನ್ನು ರೂಢಿಸಿಕೊಳ್ಳಿ. ಅಹಂ ಬಿಟ್ಟು ಸರ್ಕಾರದ ಸೌಲಭ್ಯಗಳನ್ನು (ಉದಾಹರಣೆಗೆ ಉಚಿತ ಬಸ್ ಪ್ರಯಾಣ) ಬಳಸಿಕೊಳ್ಳಲು ಕುಟುಂಬದವರಿಗೆ ಪ್ರೋತ್ಸಾಹಿಸಿ.

ನೆನಪಿಡಿ: ಪರದೇಶದಲ್ಲಿ ನೀವು ಸುರಿಸುವ ಪ್ರತಿ ಹನಿ ಬೆವರಿಗೂ ಬೆಲೆ ಇದೆ. ಅದನ್ನು ಕೇವಲ ಪ್ರದರ್ಶನಕ್ಕಾಗಿ ವ್ಯಯಿಸದೆ, ನಿಮ್ಮ ಮತ್ತು ನಿಮ್ಮ ಮಕ್ಕಳ ಸುಂದರ ಭವಿಷ್ಯಕ್ಕಾಗಿ ಉಳಿಸಿ.

✍️ ಹನೀಫ್ ಸಾಗ್ ಬಾಗ್ ಬಹರೈನ್