ಟೆಹ್ರಾನ್: ಯುಎಸ್ ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಹತರಾದ ಇರಾನ್ನ ಪರಮೋನ್ನತ ನಾಯಕ ಆಯತುಲ್ಲಾಹ್ ಅಲಿ ಖಮನೈ ಅವರ ಉತ್ತರಾಧಿಕಾರಿಯಾಗಿ ಅವರ ಪುತ್ರ ಸಯ್ಯಿದ್ ಮುಜ್ತಬಾ ಹುಸೈನಿ ಖಾಂನಈ ಅವರನ್ನು ಆಯ್ಕೆ ಮಾಡಲಾಗಿದೆ. 88 ಪ್ರಮುಖ ಧರ್ಮಗುರುಗಳನ್ನೊಳಗೊಂಡ ‘ತಜ್ಞರ ಮಂಡಳಿ’ (Assembly of Experts) ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಮುಜ್ತಬಾ ಅವರ ನೇಮಕಕ್ಕೆ ಸಂಬಂಧಿಸಿದಂತೆ ಅಮೆರಿಕ ಈವರೆಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, “ಹೊಸ ನಾಯಕನ ಆಯ್ಕೆಯಲ್ಲಿ ನಮ್ಮ ಪಾತ್ರವೂ ಇರಬೇಕು, ಇಲ್ಲದಿದ್ದರೆ ಆಯ್ಕೆಯಾದವರು ದೀರ್ಘಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿಕೆ ನೀಡಿದ್ದರು. ಇತ್ತ ಇಸ್ರೇಲ್ ಕೂಡ, “ಯಾರೇ ಆಯ್ಕೆಯಾದರೂ ಅವರು ನಮ್ಮ ಗುರಿಯಾಗಿರುತ್ತಾರೆ” ಎಂದು ನೇಮಕಾತಿಗೂ ಮುನ್ನವೇ ಎಚ್ಚರಿಕೆ ನೀಡಿದೆ.
ಸೌದಿಯಲ್ಲಿ ಇರಾನ್ ದಾಳಿ: ಭಾರತೀಯ ಸೇರಿ ಇಬ್ಬರು ಮೃತ್ಯು
ಸೌದಿ ಅರೇಬಿಯಾದ ಅಲ್-ಖರ್ಜ್ ಪ್ರದೇಶದಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಪ್ರಯತ್ನದ ವೇಳೆ, ಕ್ಷಿಪಣಿಯ ಅವಶೇಷಗಳು ಜನವಸತಿ ಪ್ರದೇಶದ ಮೇಲೆ ಬಿದ್ದ ಪರಿಣಾಮ ಒಬ್ಬ ಭಾರತೀಯ ಮತ್ತು ಒಬ್ಬ ಬಾಂಗ್ಲಾದೇಶಿ ಪ್ರಜೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 12 ಬಾಂಗ್ಲಾದೇಶಿ ಪ್ರಜೆಗಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಲ್ಲಿ ಗಾಯಗೊಂಡಿದ್ದ ಅಮೆರಿಕದ ಸೈನಿಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರೊಂದಿಗೆ ಇರಾನ್ ದಾಳಿಯಲ್ಲಿ ಮೃತಪಟ್ಟ ಅಮೆರಿಕನ್ ಸೈನಿಕರ ಸಂಖ್ಯೆ ಏಳಕ್ಕೇರಿದೆ.
ದಾಳಿಯ ಬೆನ್ನಲ್ಲೇ ಇತ್ತ ಟೆಹ್ರಾನ್ನಲ್ಲಿರುವ ತೈಲ ಸಂಗ್ರಹಾಗಾರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಇದನ್ನು ಇರಾನ್ ವಿದೇಶಾಂಗ ಸಚಿವಾಲಯವು “ಯುದ್ಧಾಪರಾಧ” ಎಂದು ಖಂಡಿಸಿದೆ.
ಯುಎಇಯಲ್ಲಿರುವ ಭಾರತೀಯರಿಗೆ ಜಾಗರೂಕತೆಯ ಸೂಚನೆ
ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯುಎಇಯಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಜಾಗರೂಕತಾ ನಿರ್ದೇಶನಗಳನ್ನು ನೀಡಿದೆ:
- ಚಿತ್ರೀಕರಣ ನಿಷೇಧ: ಭದ್ರತಾ ವಲಯಗಳು, ನಿರ್ಬಂಧಿತ ಪ್ರದೇಶಗಳು ಅಥವಾ ದಾಳಿ ನಡೆದ ಸ್ಥಳಗಳ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
- ಸುರಕ್ಷತಾ ಕ್ರಮಗಳು: ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.
- ನಿಯಮಗಳ ಪಾಲನೆ: ವಿಮಾನ ನಿಲ್ದಾಣ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಯುಎಇ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಾದ ನಿಯಮಗಳನ್ನು ಅಕ್ಷರಶಃ ಪಾಲಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.







