janadhvani

Kannada Online News Paper

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪ: ಮರಣ ಸಂಖ್ಯೆ 1400 ಕ್ಕೆ ಏರಿಕೆ- 7.8 ತೀವ್ರತೆಯ ಕಂಪನ

ಟರ್ಕಿಯಲ್ಲಿ ಕನಿಷ್ಠ 912 ಮಂದಿ ಬಲಿಯಾಗಿದ್ದು, ಸಿರಿಯಾದಲ್ಲಿ 467 ಮಂದಿ ಮೃತಪಟ್ಟಿದ್ದಾರೆ.

ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಉಭಯ ರಾಷ್ಟ್ರಗಳು ತತ್ತರಿಸಿ ಹೋಗಿವೆ. 7.8 ತೀವ್ರತೆಯ ಭೂಕಂಪವು ಆಗ್ನೇಯ ಟರ್ಕಿ ಮತ್ತು ಉತ್ತರ ಸಿರಿಯಾದಾದ್ಯಂತ ಪ್ರದೇಶಗಳನ್ನು ಧ್ವಂಸಗೊಳಿಸಿದೆ. ಟರ್ಕಿಯಲ್ಲಿ ಕನಿಷ್ಠ 912 ಮಂದಿ ಬಲಿಯಾಗಿದ್ದು, ಸಿರಿಯಾದಲ್ಲಿ 467 ಮಂದಿ ಮೃತಪಟ್ಟಿದ್ದಾರೆ. ಸೈಪ್ರಸ್ ಮತ್ತು ಲೆಬನಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಟ್ವಿಟರ್‌ನಲ್ಲಿ “ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ತಕ್ಷಣವೇ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.

ಪ್ರಕೃತಿಯ ಮುನಿಸಿನಿಂದಾಗಿ 2300 ಕ್ಕೂ ಹೆಚ್ಚು ಜನರು ಗಾಯಗೊಂಡರೆ, 1700 ಕ್ಕೂ ಅಧಿಕ ಕಟ್ಟಡಗಳು ನೆಲಕ್ಕುರುಳಿ ಬಿದ್ದಿವೆ. ಭೂಕಂಪದಿಂದ ಎರಡು ರಾಷ್ಟ್ರಗಳ 10 ಪ್ರಾಂತ್ಯಗಳು ತೀವ್ರ ಬಾಧಿತವಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜನರು ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ಟಡಗಳು ಧರಾಶಾಯಿ: ಟರ್ಕಿ, ಸಿರಿಯಾದಲ್ಲಿ ಉಂಟಾದ ಪ್ರಬಲ ಭೂಕಂಪನದಲ್ಲಿ ನೂರಾರು ಕಟ್ಟಡಗಳು ಧರೆಗೆ ಉರುಳಿಬಿದ್ದು, ನಾಮಾವಶೇಷಗೊಂಡಿವೆ. ಟರ್ಕಿಯ ಮತಾತ್ಯ ಪ್ರಾಂತ್ಯವೊಂದರಲ್ಲೇ 130 ಕಟ್ಟಡಗಳು ನಾಶವಾಗಿದ್ದರೆ, ಉಭಯ ರಾಷ್ಟ್ರಗಳಲ್ಲಿ 1700 ಕಟ್ಟಡಗಳು ಉರುಳಿಬಿದ್ದಿವೆ. ವಾಯುವ್ಯ ಸಿರಿಯಾದ ಸಿರಿಯನ್ ಸಿವಿಲ್ ಡಿಫೆನ್ಸ್ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶ “ವಿನಾಶಕಾರಿ ಪರಿಸ್ಥಿತಿ”ಗೆ ತಲುಪಿದೆ. ಕಟ್ಟಡಗಳು ಸಂಪೂರ್ಣವಾಗಿ ಕುಸಿದು ಬಿದ್ದಿವೆ. ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ತುರ್ತು ಕೇಂದ್ರಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಪಡೆಗಳೊಂದಿಗೆ ಜನರು ಸಹಕರಿಸಿ ಎಂದು ಅಲ್ಲಿನ ಅಧ್ಯಕ್ಷಗಳು ಕರೆ ನೀಡಿದ್ದಾರೆ.

ಭೂಕಂಪನದ ತೀವ್ರತೆ ಹೀಗಿದೆ: ಟರ್ಕಿಯ ಪ್ರಮುಖ ನಗರವಾದ ಗಾಜಿಯಾಂಟೆಪ್‌ನಿಂದ 30 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅಲೆಗಳು ಎದ್ದಿವೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇದು 18 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಕಂಡುಬಂದಿದೆ. ಸುಮಾರು 10 ನಿಮಿಷಗಳ ನಂತರ 7.8 ತೀವ್ರತೆಯಲ್ಲಿ ಪ್ರಬಲವಾದ ಅಲೆಗಳು ದೊಡ್ಡ ಸದ್ದಿನೊಂದಿಗೆ ಭೂಮಿಯನ್ನು ನಡುಗಿಸಿವೆ. ಇದರಿಂದ ಅಲೆಪ್ಪೊ ಮತ್ತು ಹಮಾ, ಡಮಾಸ್ಕಸ್‌ ನಗರ ಸೇರಿದಂತೆ 30 ಕಿಮೀ ವ್ಯಾಪ್ತಿಯಲ್ಲಿ ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಟರ್ಕಿಗಿದೆ ಭೂಕಂಪದ ಶಾಪ: ಟಿರ್ಕಿಯು ಭೌಗೋಳಿಕವಾಗಿಯೇ ಅಪಾಯಕಾರಿ ಸ್ಥಳದಲ್ಲಿದೆ. ಈ ಪ್ರದೇಶ ದೋಷಯುಕ್ತ ರೇಖೆಗಳ ಭಾಗದಲ್ಲಿ ಇರುವ ಕಾರಣ ಇಲ್ಲಿ ಆಗಾಗ್ಗೆ ಭೂಮಿ ನಡುಗುತ್ತದೆ. 1999 ರಲ್ಲಿ ವಾಯುವ್ಯ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಲ್ಲಿ ಸುಮಾರು 18,000 ಜನರು ಬಲಿಯಾಗಿದ್ದು, ಇತಿಹಾದಲ್ಲಿಯೇ ಭೀಕರ ದುರಂತವಾಗಿತ್ತು. ಮೂರು ವರ್ಷಗಳ ಹಿಂದೆ ಅಂದರೆ 2000 ನೇ ಇಸ್ವಿಯಲ್ಲಿ ಉಂಟಾದ 6.8 ತೀವ್ರತೆಯ ಭೂಕಂಪನದಲ್ಲಿ 40 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು.

ಟರ್ಕಿಗೆ ಭಾರತದ ರಕ್ಷಣಾ ಪಡೆ ರವಾನೆ: ಭೂಕಂಪ ಪೀಡಿತ ಟರ್ಕಿಗೆ ಎನ್‌ಡಿಆರ್‌ಎಫ್ ಮತ್ತು ವೈದ್ಯಕೀಯ ಮತ್ತು ರಕ್ಷಣಾ ತಂಡಗಳನ್ನು ಪರಿಹಾರ ಸಾಮಗ್ರಿಗಳೊಂದಿಗೆ ತಕ್ಷಣವೇ ರವಾನಿಸಲು ನಿರ್ಧರಿಸಲಾಗಿದೆ. ವಿಶೇಷ ತರಬೇತಿ ಪಡೆದ ಶ್ವಾನದಳಗಳು ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ನ ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೋಗಲಿವೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.ವೈದ್ಯಕೀಯ ತಂಡಗಳು, ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಅಗತ್ಯ ಔಷಧಿಗಳೊಂದಿಗೆ ಸಿದ್ಧವಾಗಿವೆ. ಟರ್ಕಿಯಲ್ಲಿ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾನ್‌ಬುಲ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಕಚೇರಿಯ ಸಮನ್ವಯದಲ್ಲಿ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗುವುದು ಎಂದು ಪಿಎಂಒ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ 

“ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಿಂದ ದುಃಖವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಭಾರತ ಟರ್ಕಿಯ ಜನರೊಂದಿಗೆ ನಿಲ್ಲುತ್ತದೆ. ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರಿಗೆ ಟ್ಯಾಗ್​ ಮಾಡಿದ್ದಾರೆ.ಇತ್ತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೂಡ ಭೂಕಂಪದಿಂದಾದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. “ಟರ್ಕಿಯಲ್ಲಿನ ಭೂಕಂಪದಲ್ಲಿ ಜೀವಹಾನಿ ಮತ್ತು ಹಾನಿಯಿಂದ ತೀವ್ರ ದುಃಖಿತವಾಗಿದೆ. ಈ ಕಷ್ಟದ ಸಮಯದಲ್ಲಿ ನೆರವು ನೀಡಲಾಗುವುದು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com