janadhvani

Kannada Online News Paper

ಮುಸ್ಲಿಂ ವಿರುದ್ಧ ಗಲಭೆಗೆ ಆಹ್ವಾನ: ಸರ್ಕಾರ ಮೌನ- ಯುಎಇ ರಾಜಕುಮಾರಿ ಗರಂ

ಎಲ್ಲಾ ಪ್ರಾಣಿಗಳು ಸಮಾನವಾಗಿವೆ ಆದರೆ ಕೆಲವು ಇತರರಿಗಿಂತ ಹೆಚ್ಚು ಸಮಾನವಾಗಿವೆ

ಶಾರ್ಜಾ ರಾಜಮನೆತನದ ಸದಸ್ಯೆ ಶೈಖಾ ಹಿಂದ್ ಬಿಂತ್ ಫೈಸಲ್ ಆಲ್ ಖಾಸ್ಮಿ ಅವರು ಜಾರ್ಜ್ ಆರ್ವೆಲ್ ಅವರ ಪುಸ್ತಕ ‘ಅನಿಮಲ್ ಫಾರ್ಮ್’ ಅನ್ನು ಉಲ್ಲೇಖಿಸಿ ಹಿಂದುತ್ವ ಶಕ್ತಿಗಳನ್ನು ಟೀಕಿಸಿದ್ದಾರೆ.

ಕಾದಂಬರಿಯ ಕವರ್ ಪೇಜ್ ಜೊತೆಗೆ ಟ್ವೀಟ್ ನಲ್ಲಿ ಟೀಕೆ ಬಂದಿದೆ. “All animals are equal but some are more equal than others”
(ಎಲ್ಲಾ ಪ್ರಾಣಿಗಳು ಸಮಾನವಾಗಿವೆ ಆದರೆ ಕೆಲವು ಇತರರಿಗಿಂತ ಹೆಚ್ಚು ಸಮಾನವಾಗಿವೆ) ಎಂಬ ಅನಿಮಲ್ ಫಾರ್ಮ್‌ನಿಂದ ಜಾರ್ಜ್ ಆರ್ವೆಲ್ ಅವರ ಉಲ್ಲೇಖವನ್ನು ಶೇಖ್ ಹಿಂದ್ ಅವರು ಟ್ವೀಟ್ ಮಾಡಿದ್ದಾರೆ.


ಆರ್ವೆಲ್ ಅವರ ಮಾತುಗಳು ನಾಜಿಸಂ, ಕಮ್ಯುನಿಸಂ, ಜಿಯೋನಿಸಂ ಮತ್ತು ಹಿಂದುತ್ವ ಸೇರಿದಂತೆ ಕಳೆದ 100 ವರ್ಷಗಳ ಧಾರ್ಮಿಕ ಮತ್ತು ರಾಜಕೀಯ ಭಯೋತ್ಪಾದಕರನ್ನು ನೆನಪಿಸುತ್ತದೆ ಎಂದು ಶೇಖ್ ಹಿಂದ್ ಟ್ವೀಟ್ ಮಾಡಿದ್ದಾರೆ.

ಹರಿದ್ವಾರದಲ್ಲಿ ಮುಸ್ಲಿಮರ ವಿರುದ್ಧ ಗಲಭೆ ಆಹ್ವಾನವಿತ್ತ ಹಿಂದುತ್ವ ಶಕ್ತಿಗಳ ಕರೆ ಮತ್ತು ಅದರ ಬಗ್ಗೆ ಸರ್ಕಾರದ ಅಸಡ್ಡೆಯ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಶೈಖಾ ಹಿಂದ್ ಅವರು ಟ್ವಿಟರ್‌ನಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಹೆಸರುವಾಸಿಯಾಗಿರುವ ಭಾರತದ ಮಣ್ಣಿನಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ, ಹತ್ಯೆ, ಹಿಂಸೆ, ಗಲಭೆ ನಡೆಸಿ ಶಾರೀರಿಕ, ಮಾನಸಿಕ ಮತ್ತು ಆರ್ಥಿಕವಾಗಿ ಪೀಡಿಸುತ್ತಿರುವ ಹಿಂದುತ್ವ ಉಗ್ರವಾದ ವಿರುದ್ಧ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ನೈಜ ಹಿಂದೂ ಧರ್ಮದ ವಕ್ತಾರರನ್ನೇ ತಲೆತಗ್ಗಿಸುವಂತೆ ಮಾಡುತ್ತಿದೆ.

ಭಾರತದಲ್ಲಿ ‘ಹಿಂದುತ್ವ’ ದ ಹೆಸರಿನಲ್ಲಿ ನಡೆಯುವ ಕೋಮು ಪ್ರಚೋಧನಾಕಾರಿ ಚಟುವಟಿಕೆಗಳು, ಅರಬ್ ದೇಶಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವ ಸಾಮಾನ್ಯ ಹಿಂದೂ ಸಹೋದರರಿಗೆ ತೊಡಕಾಗಿ ಪರಿಣಮಿಸಿದೆ.