ಮಂಗಳೂರು: ಬೋಳಿಯಾರ್ ಸಮೀಪದ ಸುಬ್ಬಗುಳಿ ಮಸೀದಿ ಬಳಿ ಕಳೆದ ರಾತ್ರಿ ಫ್ಯಾಶಿಸ್ಟ್ ಶಕ್ತಿಗಳು ಕೋಮು ಸಾಮರಸ್ಯ ಕೆಡಿಸುವ ಪ್ರಯತ್ನದ ಭಾಗವಾಗಿ ಘೋಷಣೆಗಳು ಕೂಗಿರುವುದು ಹಾಗೂ ದಾಳಿ ಮಾಡಲು ಯತ್ನಿಸಿದ ಪ್ರಕರಣವನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.
ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ನಡೆಯುವ ಇಂತಹ ದಾಳಿಗಳಿಂದ ಕೋಮು ಸೌಹಾರ್ದತೆ ನಷ್ಟಹೊಂದುತ್ತದೆ. ಸರ್ವ ಧರ್ಮೀಯರ ನಡುವಿನ ವಿಶ್ವಾಸ, ನಂಬಿಕೆ ಇಲ್ಲವಾಗುತ್ತಿದೆ. ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ಮಾಡಿದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕೆಂದು ಪೋಲೀಸ್ ಇಲಾಖೆಯೊಂದಿಗೆ ಮನವಿ ಮಾಡುತ್ತಿದ್ದೇವೆ.
ಬುದ್ಧಿವಂತರ ಜಿಲ್ಲೆಯೆಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇಂತಹ ಕುಕೃತ್ಯಗಳು ಅಧಿಕವಾಗುತ್ತಿರುವುದು ನಾಚಿಕೆಗೇಡಿನ ವಿಷಯ. ಕೋಮು ಸಂಘರ್ಷಗಳಿಗೆ ಕಾರಣವಾಗುವ ಇಂತಹ ದುಷ್ಕೃತ್ಯಗಳು ಮರುಕಳಿಸಿದಂತೆ ನೋಡಿಕೊಳ್ಳುವ ಜತೆಗೆ ಇದನ್ನು ಮಾಡುವವರಿಗೆ ಕಠಿಣ ಶಿಕ್ಷೆ ನೀಡುವ ಪ್ರಯತ್ನ ಮಾಡಬೇಕು. ಸರಕಾರ ಹಾಗೂ ಪೋಲೀಸ್ ವಿಭಾಗದವರು ಆರಾಧನಾಲಯಗಳಿಗೆ ವಿಶೇಷ ಭದ್ರತೆ ಒದಗಿಸಲು ಎಸ್ಸೆಸ್ಸೆಫ್ ದಕ್ಷಿಣ ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಪತ್ರಿಕಾಗೋಷ್ಠಿಯಲ್ಲಿ ವಿನಂತಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಮದ್ಯನಡ್ಕ, ಕಾರ್ಯದರ್ಶಿಗಳಾದ ಇಬ್ರಾಹಿಂ ಅಹ್ಸನಿ, ಹಮೀದ್ ತಲಪಾಡಿ, ಜಿಲ್ಲಾ ನಾಯಕರಾದ ಮನ್ಸೂರ್ ಹಿಮಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







